ಬೆಂಗಳೂರು, ಅಕ್ಟೋಬರ್ 23: ದೀಪಾವಳಿ ಹಬ್ಬದಸಂಭ್ರಮ ಎಲ್ಲೆಲ್ಲೂ ಮನೆಮಾಡಿದೆ. ರಾತ್ರಿಯಾದರೆ ಸಾಕು ಎಲ್ಲೆಲ್ಲೂ ಪಟಾಕಿಗಳ ಸದ್ದೇ ಕೇಳುತ್ತದೆ. ಇದೇ ಪಟಾಕಿಸಿಡಿತದಿಂದ ನಗರದಲ್ಲಿ ಕಳೆದ ಎರಡ್ಮೂರು ದಿನಗಳಿಂದ 250ಕ್ಕೂ ಹೆಚ್ಚು ಜನರ ಕಣ್ಣಿಗೆ ಹಾನಿಯುಂಟಾಗಿದೆ. ಆಘಾತಕಾರಿ ವಿಷಯ ಎಂದರೆ ಕೆಲ ಜನರು ಶಾಶ್ವತವಾಗಿ ದೃಷ್ಟಿ ಕಳ್ಕೊಂಡಿದ್ದಾರೆ. ಬೆಳಕಿನ ಹಬ್ಬ ಅಂಥವರ ಪಾಲಿಗೆ ಕತ್ತಲು ಆವರಿಸುವಂತೆ ಮಾಡಿದೆ.
ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ 90 ಗಾಯಾಳುಗಳು ದಾಖಲಾಗಿದ್ದರೆ, ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 37, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 35, ಹಾಗೇನೆ ಪ್ರಭಾ ಕಣ್ಣಿನ ಆಸ್ಪತ್ರೆಯಲ್ಲಿ 13 ಮಂದಿ, ಮೋದಿ ಆಸ್ಪತ್ರೆಯಲ್ಲಿ 3 ಮಂದಿ ಮತ್ತು ಅಗರ್ವಾಲ್ ಕಣ್ಣಿನ ಆಸ್ಪತ್ರೆಯಲ್ಲಿ 4 ಕೇಸ್ಗಳು ದಾಖಲಾಗಿವೆ.
ಇನ್ನು ಈ ಬಗ್ಗೆ ಮಿಂಟೋ ಆಸ್ಪತ್ರೆಯ ಅಪಾರ ನಿರ್ದೇಶಕ ಡಾ ಶಶಿಧರ್ ಮಾತನಾಡಿದ್ದು, 37 ಜನರ ಪೈಕಿ 9 ರೋಗಿಗಳು ದಾಖಲಾತಿ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. 14 ಜನರಿಗೆ ತೀವ್ರ ಗಾಯವಾಗಿದೆ. 2 ರೋಗಿಗಳ ದೃಷ್ಠಿ ದೋಷ ಎದುರಾಗಿದೆ ಎಂದು ಹೇಳಿದ್ದಾರೆ
ಅರಸಿಕೇರೆ ಮೂಲದ 14 ವರ್ಷದ ವಿದ್ಯಾರ್ಥಿ ಕಣ್ಣುಗುಡ್ಡೆ ಒಡೆದು ದೃಷ್ಠಿ ಕಳೆದುಕೊಂಡಿದ್ದಾನೆ. ಸ್ನೇಹಿತರ ಜೊತೆ ಪಟಾಕಿ ಸಿಡಸುವ ವೇಳೆ ಬಾಂಬ್ ಪಟಾಕಿ ಸಿಡದು ಘಟನೆ ನಡೆದಿದೆ. ಪಟಾಕಿ ಸಿಡದ ತೀವ್ರತೆಗೆ ಕಾರ್ನಿಯ ಒಡೆದು ಮೂರು ಭಾಗವಾಗಿದೆ. ಸದ್ಯ ಮಗನ ಮುಂದಿನ ಭವಿಷ್ಯ ನೆನೆದು ತಾಯಿ ಕಣ್ಣೀರು ಹಾಕಿದ್ದಾರೆ. ಬಡತನ ಹಿನ್ನಲೆ ತಾಯಿ ಜೊತೆ ಗಾರೆ ಕೆಲಸಕ್ಕೆ ಹೋಗುತ್ತಿದ್ದ.
ಮಿಂಟೋ ಆಸ್ಪತ್ರೆಯಲ್ಲಿ ಒಂದು ಗಂಭೀರ ಪ್ರಕರಣ ಕೂಡ ದಾಖಲಾಗಿದೆ. 19 ವರ್ಷದ ಬಿಹಾರ್ ಮೂಲದ ಯುವಕನ ಎಡಗಣ್ಣು ಸಂಪೂರ್ಣ ದೃಷ್ಠಿ ದೋಷವಾಗಿದೆ. ಫ್ಲವರ್ ಪಾಟ್ ಸಿಡಿಸುವ ವೇಳೆ ಅನಾಹುತ ಸಂಭವಿಸಿದ್ದು, ಯುವಕನ ಕಣ್ಣಿನ ಗುಡ್ಡೆಯೇ ಸೀಳಿದೆ. ಫ್ಲವರ್ ಪಾಟ್ ಪಟಾಕಿಯನ್ನು ಕೈಯಲ್ಲಿ ಎತ್ತಿಕೊಂಡು ಯುವಕ ಶೋ ಕೊಟ್ಟಿದ್ದ. ಕೈಗೆ ಎತ್ತಿಕೊಂಡ ಕೂಡಲೇ ಫ್ಲವರ್ ಪಾಟ್ ಸಿಡಿದು ಕಣ್ಣಿಗೆ ಹಾನಿಯುಂಟಾಗಿದೆ.