ಬೆಂಗಳೂರು, ಮಾರ್ಚ್ 4: ಸೋಮವಾರ ನಡೆದ ದ್ವಿತೀಯ ಪಿಯುಸಿ ಗಣಿತ ಪರೀಕ್ಷೆಗೆ ಕರ್ನಾಟಕದಾದ್ಯಂತ 12,533 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ಯಾವುದೇ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಎಸಗಿದ ಅಥವಾ ದುಷ್ಕೃತ್ಯ ಎಸಗಿದ ಪ್ರಕರಣಗಳು ವರದಿಯಾಗಿಲ್ಲ. 2024 ರ ಪರೀಕ್ಷೆಗಳಿಂದ ಜಾರಿಗೆ ತರಲಾದ ಪರೀಕ್ಷೆಗಳ ವೆಬ್ ಸ್ಟ್ರೀಮಿಂ ಹಾಗೂ ಇತರ ಕಟ್ಟುನಿಟ್ಟಿನ ಕ್ರಮಗಳು ಅಕ್ರಮವನ್ನು ತಟೆಗಟ್ಟುವಲ್ಲಿ ನೆರವಾಗಿವೆ ಎಂದು ಅಧಿಕಾರಿಗಳು ಅಬಿಪ್ರಾಯಪಟ್ಟಿದ್ದಾರೆ.
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಶನಿವಾರದಿಂದ (ಮಾರ್ಚ್ 01) ಆರಂಭವಾಗಿದೆ. ಮಾರ್ಚ್ 20ರವರೆಗೆ ಪರೀಕ್ಷೆ ನಡೆಯಲಿದ್ದು, ಒಟ್ಟು 1171 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. 7,13,862 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. 6,61,474 ಹೊಸ ವಿದ್ಯಾರ್ಥಿಗಳು, 34,071 ಪುನರಾವರ್ತಿತ ವಿದ್ಯಾರ್ಥಿಗಳು, 18,317 ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ, ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎರಡಕ್ಕೂ ಹೆಸರು ನೋಂದಾಯಿಸಿಕೊಂಡ ವಿದ್ಯಾರ್ಥಿಗಳ ಸಂಖ್ಯೆ ಈ ವರ್ಷ ಹೆಚ್ಚಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.