ಉತ್ತರ ಕನ್ನಡ, ನವೆಂಬರ್ 22: ರಾಜ್ಯದೆಲ್ಲೆಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿ ಕಡಿತದಿಂದ ಹಲವು ಸಾವುಗಳೂ ಸಂಭವಿಸಿವೆ. ಈ ವರ್ಷದಲ್ಲಿಯೇ ಕರ್ನಾಟಕದಲ್ಲಿ ಬರೋಬ್ಬರಿ 2.8 ಲಕ್ಷಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. ಇದೀಗ ಅಂಥದ್ದೇ ಪ್ರಕರಣಗಳು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ನಡೆದಿದ್ದು, ಕಳೆದ ಮೂರು ದಿನಗಳಲ್ಲಿ 12 ಕ್ಕೂ ಹೆಚ್ಚು ಜನರು ಶ್ವಾನ ದಾಳಿಗೆ ಗುರಿಯಾಗಿದ್ದಾರೆ.
ದಾಂಡೇಲಿ ತಾಲೂಕು ಆಸ್ಪತ್ರೆಯಲ್ಲಿ ಪ್ರತಿದಿನ ಕನಿಷ್ಠ ಐದು ಮಂದಿಗೆ ರೆಬಿಸ್ ಲಸಿಕೆ ನೀಡಲಾಗುತ್ತಿದ್ದು, ಬೀದಿ ನಾಯಿಗಳ ಕಾಟ ಹೆಚ್ಚುತ್ತಿದೆ ಎಂದು ತಿಳಿದು ಬಂದಿದೆ. ನಗರದಲ್ಲಿ ಸುಮಾರು 2,000 ಕ್ಕೂ ಹೆಚ್ಚು ಶ್ವಾನಗಳಿದ್ದು, ಲಸಿಕೆ ಹಾಗೂ ಚಿಕಿತ್ಸೆ ನೀಡುವಲ್ಲಿ ನಗರಸಭೆಗೆ ಕಷ್ಟ ಎದುರಾಗಿದೆ. ಶ್ವಾನಗಳ ಸಂಖ್ಯೆಯ ಏರಿಕೆಯನ್ನು ತಡೆಯಲು ಜಿಲ್ಲಾಡಳಿತವು ಪ್ರತಿದಿನ 20 ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುವ ಕ್ರಮ ಕೈಗೊಂಡಿದೆ. ಅಸ್ಥಿರ ಆಹಾರ, ತ್ಯಾಜ್ಯ ಸೇವನೆಯಿಂದ ನಾಯಿಗಳಲ್ಲಿ ಮಾನಸಿಕ-ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ, ಮಕ್ಕಳ ಹಾಗೂ ವಯೋವೃದ್ಧರ ಮೇಲೆ ದಾಳಿ ಪ್ರಕರಣಗಳು ಹೆಚ್ಚುತ್ತಿವೆ ಎಂದು ತಿಳಿದು ಬಂದಿದೆ.


