ಸಡಗರ ಸಂಭ್ರಮದಿಂದ ಜರುಗಿದ ಮೋಕ ಮಲ್ಲೇಶ್ವರ ಸ್ವಾಮಿ ರಥೋತ್ಸವ

Sandeep Malannavar
ಸಡಗರ ಸಂಭ್ರಮದಿಂದ ಜರುಗಿದ ಮೋಕ ಮಲ್ಲೇಶ್ವರ ಸ್ವಾಮಿ ರಥೋತ್ಸವ
WhatsApp Group Join Now
Telegram Group Join Now
ಬಳ್ಳಾರಿ. ಫೇ. 09; ತಾಲೂಕಿನ ಮೋಕಾ ಗ್ರಾಮದ ಆರಾಧ್ಯದೈವ  ಮಲ್ಲೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಇಂದು ಸಾವಿರಾರು ಭಕ್ತರ ಹರ್ಷದ್ವಾರದ ನಡುವೆ ಸಡಗರ ಸಂಭ್ರಮದಿಂದ  ಡೊಳ್ಳು ಕುಣಿತ ಜಾನಪದ ಸಂಸ್ಕೃತಿ ಮತ್ತು ವಿವಿಧ ಜನಪದ ಕಲಾ ಪ್ರಕಾರಗಳೊಂದಿಗೆ   ವೈಭವ ದೊಂದಿಗೆ ಅದ್ದೂರಿಯಾಗಿ ಜರುಗಿತು.
ಜಿಲ್ಲೆಯ ವಿವಿಧ ತಾಲ್ಲೂಕುಗಳು ಹಾಗೂ  ಹೊರ ರಾಜ್ಯದ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಭಕ್ತಿ ಸಮರ್ಪಿಸಿ ಮಲ್ಲೇಶ್ವರ ಸ್ವಾಮಿ ಕೃಪೆಗೆ ಪಾತ್ರರಾದರು.
ರಥೋತ್ಸವದ ಆರಂಭದೊಂದಿಗೆ ಉತ್ಸವಕ್ಕೆ ಸಾಂಸ್ಕೃತಿಕ ರಂಗು ತುಂಬಿದ್ದು, ಡೊಳ್ಳು ಕುಣಿತ, ಗೊರವರ ಕುಣಿತ, ಗೊಂಬೆ ಕುಣಿತ, ಮಂಗಳ ವಾದ್ಯದ ತಂಡಗಳು ಹಾಗೂ ವಿವಿಧ ಜನಪದ ಕಲಾ ಪ್ರಕಾರಗಳನ್ನು ಪ್ರದರ್ಶಿಸಿದ ಕಲಾವಿದರು ರಥೋತ್ಸವಕ್ಕೆ ವಿಶಿಷ್ಟ ಮೆರುಗು ನೀಡಿದರು. ವಾದ್ಯಗಳ ನಾದ,ಗೊರವರ ಕುಣಿತ ಜನಪದ ನೃತ್ಯಗಳ ತಾಳಮೇಳ ಮತ್ತು ಭಕ್ತರ ಘೋಷಣೆಗಳು ಇಡೀ ಪ್ರದೇಶವನ್ನು ಭಕ್ತಿಮಯ ವಾತಾವರಣದಲ್ಲಿ ಮುಳುಗಿಸಿತು. ಮಕ್ಕಳು, ಮಹಿಳೆಯರು ಹಾಗೂ ಪುರುಷರು ಸೇರಿದಂತೆ ಎಲ್ಲ ವಯೋಮಾನದ ಜನರು ಅಪಾರ ಉತ್ಸಾಹದಿಂದ ರಥೋತ್ಸವ ದಲ್ಲಿ ಪಾಲ್ಗೊಂಡು,  ಸ್ವಾಮಿಗೆ ಬಾಳೆಹಣ್ಣು ಮತ್ತು ಹೂವುಗಳನ್ನು ಅರ್ಪಿಸಿ  ಹರಕೆಗಳನ್ನು ಸಲ್ಲಿಸಿದರು.
ಈ ಮಹೋತ್ಸವದಲ್ಲಿ ಜನಪ್ರತಿನಿಧಿಗಳು, ಸ್ಥಳೀಯ ನಾಯಕರು, ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿ ದೇವರ ದರ್ಶನ ಪಡೆದು ಭಕ್ತರೊಂದಿಗೆ ಸಂಭ್ರಮ ಹಂಚಿಕೊಂಡರು. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನಸಂದಣಿಯಿಂದ ರಥೋತ್ಸವ ಮಾರ್ಗಗಳಲ್ಲಿ ಕ್ಷಣ ಕ್ಷಣಕ್ಕೂ ಜನಸಾಗರವೇ ಕಾಣಿಸಿಕೊಂಡಿದ್ದು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ವಿಶೇಷ ಭದ್ರತಾ ಕ್ರಮಗಳನ್ನು ಕೈಗೊಂಡು ಸಂಚಾರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಪ್ರಾತಃಕಾಲದಿದಲೇ ಮಲ್ಲೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕಗಳು ಹಾಗೂ ಧಾರ್ಮಿಕ ವಿಧಿವಿಧಾನಗಳು ನಿರಂತರವಾಗಿ ನಡೆದಿದ್ದು, ಭಕ್ತರಲ್ಲಿ ಆಧ್ಯಾತ್ಮಿಕ ಉತ್ಸಾಹ ಮತ್ತಷ್ಟು ಹೆಚ್ಚಿಸಿತು. ಸಮುದಾಯದ ಒಗ್ಗಟ್ಟು, ಜನಪದ ಸಂಸ್ಕೃತಿ ಮತ್ತು ಭಕ್ತಿಭಾವದ ಅನನ್ಯ ಸಂಗಮವಾಗಿ ಮೋಕಾ ಮಲ್ಲೇಶ್ವರ ಜಾತ್ರಾ ಮಹೋತ್ಸವವು ಈ ಬಾರಿ ಕೂಡ ಬಳ್ಳಾರಿಯ ಧಾರ್ಮಿಕ–ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಮಹತ್ವದ ಆಚರಣೆಯಾಗಿ ಮೂಡಿಬಂದಿದೆ.
  ಜಾತ್ರೆಗೆ ಆಗಮಿಸುವ ಭಕ್ತರಿಗೆ ಬೆಳಿಗ್ಗೆ ಯಿಂದ ಮಜ್ಜಿಗೆ ತಂಪು ಪಾನಿಯಗಳು ಅಲ್ಲಲ್ಲಿ ವಿತರಿಸುತ್ತಿದ್ದು ಕಂಡು ಬಂತು.
WhatsApp Group Join Now
Telegram Group Join Now
Share This Article