ಕಿಲ್ಲಾ ತೊರಗಲ್ಲ- 05, ರಾಮದುರ್ಗ ತಾಲೂಕಿನ ಕಿಲ್ಲಾ ತೊರಗಲ್ಲದಲ್ಲಿ ರವಿವಾರ ದಿ.06 ರಂದು ಹಿಂದೂ – ಮುಸ್ಲಿಮರ ” ಸೌಹಾರ್ದತೆ ಹಾಗೂ ಭಾವೈಕ್ಯತೆಯ ” ಪ್ರತೀಕವಾಗಿರುವ ‘ ಮೊಹರಂ ಹಬ್ಬದ ‘ ಆಚರಣೆಯು ಸಡಗರ , ಸಂಭ್ರಮಗಳೊಂದಿಗೆ ನೆರವೇರಲಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಕಿಲ್ಲಾ ತೊರಗಲ್ಲ ಸಂಸ್ಥಾನ ಕಾಲದಲ್ಲಿ ಹಿಂದೂ , ಮುಸ್ಲೀಮ್, ಜೈನ, ಮರಾಠಾ ಹೀಗೆ ಅನೇಕಾನೇಕ ರಾಜ ಮಹಾರಾಜರು, ಆಳರಸರು ಸಂಸ್ಥಾನವನ್ನು ಆಳಿ , ಅಳಿದು ಹೋಗಿದ್ದರೂ ಕೂಡ ಜಾತಿಯ ಸಾಮರಸ್ಯವನ್ನು ಕಾಪಾಡಿಕೊಂಡು ಬಂದಿರುವ ಈ ಕಿಲ್ಲಾ ತೊರಗಲ್ಲ ಗ್ರಾಮವು ಶತ ಶತಮಾನಗಳ ಹಿಂದಿನ ಸಾಮರಸ್ಯ , ಸೌಹಾರ್ದತೆ ಮತ್ತು ಭಾವೈಕ್ಯತೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ , ಕಾರಣ ಈ ಪವಿತ್ರ ಮಣ್ಣಿನಲ್ಲೇ ಅಂಥಹ ದಿವ್ಯವಾದ ಅಧ್ಯಾತ್ಮಿಕ ಮಹಾನ್ ಶಕ್ತಿಯು ಮಿಳೀತಗೊಂಡಂತಿದೆ. ಮಹಾ .. ಮಹಾ ಶಿವ ಶರಣರು , ಆಧ್ಯಾತ್ಮಿಕ ಸಾಧಕರು , ತಪಸ್ವಿಗಳು, ಸೂಫೀ ಸಂತರು, ಫಕೀರರು ನಡೆದಾಡಿರುವ ಪುಣ್ಯಭೂಮಿ ಮಾತ್ರವಲ್ಲ, ಅವರೆಲ್ಲರ ತಪಸ್ಸು, ಆಧ್ಯಾತ್ಮಿಕ ಸಾಧನೆಗಳೆಲ್ಲ ಈ ಮಣ್ಣಿನೊಂದಿಗೆ ಬೆರೆತುಕೊಂಡಿದೆ ಎನ್ನಬಹುದು. ಕಾಲಗರ್ಭದಲ್ಲಿ ಹುದುಗಿ ಹೋದ ನೂರಾರು ಜಾತಿ , ಮತ, ಪಂಥಗಳ ಸಂಘರ್ಷಗಳಿಗೆ ಜಗತ್ತೇ ” ರಂಗ ” ಒದಗಿಸಿಕೊಟ್ಟಿದ್ದರೂ ಕೂಡ ನಮ್ಮ ಈ ತೊರಗಲ್ಲ ಗ್ರಾಮವು ಮಾತ್ರ ತನ್ನ ಮೌನ ಮುರಿದಿಲ್ಲ ಎಂಬುದು ಸಮಾಧಾನಕರ ಸಂಗತಿ.
” ಮೋಹರಂ ಹಬ್ಬವು ” ಹಿಂದೂ – ಮುಸ್ಲಿಮರ ಸೌಹಾರ್ದತೆ ಹಾಗೂ ಭಾವೈಕ್ಯತೆಯ ಪ್ರತೀಕವಾಗಿರುವ ಹಬ್ಬಗಳಲ್ಲಿ ಪ್ರಮುಖವಾದದ್ದು ಎಂದು ಬೇರೆ ಹೇಳಬೇಕಿಲ್ಲ. ಯಾವುದೇ ತೆರನಾದ ತಾರತಮ್ಯ ಇಲ್ಲದೇ ಈ ಹಬ್ಬದಲ್ಲಿ ಎಲ್ಲರೂ ಒಂದಾಗಿ ಪಾಲ್ಗೊಂಡು ಆಚರಿಸುವ ಗ್ರಾಮೀಣ ಪ್ರದೇಶದ ” ಹಬ್ಬವು ” ಇದಾಗಿದ್ದು, ಇದಕ್ಕೆ ‘ ಅಲ್ಹಾಬ್ ಹಬ್ಬ ‘ ಅಂತಲೂ ಕರೆಯುವ ವಾಡಿಕೆಯು ಜನ ಜನೀತವಾಗಿದೆ.
ಹತ್ತು ದಿನಗಳಿಂದ ನಡೆಯುತ್ತಿರುವ ಈ ” ಮೋಹರಂ ಹಬ್ಬದ ” ಆಚರಣೆಯ ಪ್ರಯುಕ್ತ ಸಂಸ್ಥಾನದ ಕಾಲದಿಂದಲೂ ಸಂಸ್ಥಾನದ ಮಹರಾಜರ ಅರಮನೆಯಿಂದ ಊರಲ್ಲಿನ ಪ್ರಮುಖ ಮಸೀದಿಗಳಿಗೆ ” ಲಾಡಿ, ಸಕ್ಕರೆ, ಊದು ” ನಿತ್ಯ ಕಳಿಸುವ ಪರಂಪರೆಯು ಅನಾದಿಕಾಲದಿಂದಲೂ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಗುರುವಾರ ದಿ.03 ರಂದು ” ಲಾಲಸಾಬ ದೇವರು ” ಏಳುವುದರೊಂದಿಗೆ ಆರಂಭವಾದ ಮೋಹರಂ ಹಬ್ಬ, ಶನಿವಾರ ದಿ.05 ರಂದು ಊರೊಳಗಿನ ” ಕಾಸೀಮಸಾಬ ದೇವರು ” ಕತ್ತಲ ರಾತ್ರಿಯ ಬೆಳಗಿನ ಜಾವ ಏಳುವುದು. ಈ ಸಂದರ್ಭದಲ್ಲಿ ತೊರಗಲ್ಲ-ವ- ಖಾನಪೇಠ ಗ್ರಾಮದ ಜನತೆ ಮಾತ್ರವಲ್ಲದೇ ಪರ ಊರಿನಿಂದಲೂ ಅಸಂಖ್ಯಾತ ಜನರು ಬಂದು ಸೇರುತ್ತಾರೆ.
ಮಾರನೆಯದಿನ ರವಿವಾರ ದಿ. 06 ರಂದು ಬೆಳಗಿನ ಜಾವದಿಂದ ಸಾಯಂಕಾಲ ವರೆಗೆ ಎಲ್ಲಾ ಮಸೀದಿಗಳಲ್ಲಿನ ” ದೇವರ ಪಂಜಾ, ಹಾಗೂ ಡೋಲಿಗಳು ” ಏಳುತ್ತವೆ. ಅದೇ ದಿನ ಸಾಯಂಕಾಲ 5.30 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ದೇವರು ಹೊಳೆಗೆ ಹೋಗುವ ದೃಶ್ಯವು ದೂರದೂರಿನಿಂದ ಆಗಮಿಸಿದ ಭಕ್ತಾಧಿಗಳ ಕಣ್ಮನ ಸೆಳೆಯುತ್ತದೆ, ಈ ಕಾರಣದಿಂದಲೇ ವರ್ಷದಿಂದ ವರ್ಷಕ್ಕೆ ” ತೊರಗಲ್ಲ ಮೋಹರಂ ಹಬ್ಬವನ್ನು ” ನೋಡಲು ಬರುವ ಪರ ಊರಿನ ಭಕ್ತಾಧಿಗಳ ಸಂಖ್ಯೆಯು ಹೆಚ್ಚುತ್ತಲೇ ಸಾಗಿದೆ.
ಕಿಲ್ಲಾ ತೊರಗಲ್ಲ ಗ್ರಾಮವು, ರಾಮದುರ್ಗ ದಿಂದ ಬೆಳಗಾವಿಯ ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದು , ರಾಮದುರ್ಗ ಹಾಗೂ ಕಟಕೋಳದಿಂದ ಕೇವಲ 11 ಕಿ.ಮೀ. ಅಂತರದಲ್ಲಿದೆ, ಇಲ್ಲಿಗೆ ಬಂದು ಹೋಗಲು ಸಾಕಷ್ಟು ಅಟೋ, ಬಸ್ಸುಗಳ ಸಾರಿಗೆ ಸಂಪರ್ಕದ ವ್ಯವಸ್ಥೆಯು ಇರುವುದು.