ಬೆಂಗಳೂರು, ಜೂನ್ 10: ಗೊಟ್ಟಿಗೆರೆ ಹಾಗೂ ನಾಗವಾರ ನಡುವಣ ನಮ್ಮ ಮೆಟ್ರೋ ಪಿಂಕ್ ಮಾರ್ಗದ ಪಾಟರಿ ಟೌನ್ ಸ್ಟೇಷನ್ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಿಡಲು ಒತ್ತಡ ಹೆಚ್ಚಾಗಿದೆ.
ಪಾಟರಿ ಟೌನ್ ಮೆಟ್ರೋ ಸ್ಟೇಷನ್ಗೆ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಹೆಸರಿಡುವಂತೆ ಪ್ರಧಾನಿ ನರೇಂದ್ರ ಮೋದಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯಪಾಲರು ಹಾಗೂ ಮೆಟ್ರೋ ಎಂಡಿಗೆ ಕರ್ನಾಟಕ ಬಹುಜನ ಫೆಡರೇಶನ್ ಪತ್ರ ಬರೆದಿದೆ. ಈ ಪತ್ರಕ್ಕೆ ಈಗಾಗಲೇ ಪ್ರಧಾನಿ ಕಾರ್ಯಾಲಯದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದ್ದು, ಸಿಎಂ ಸಿದ್ದರಾಮಯ್ಯ ಕೂಡ ಮೆಟ್ರೋ ಎಂಡಿಗೆ ಮನವಿ ಪರಿಶೀಲಿಸಲು ಪತ್ರ ಬರೆದಿದ್ದಾರೆ.
ನಿಯಮಾನುಸಾರು ಅಪ್ಪು ಹೆಸರು ಇಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೋರಾಟಗಾರರಿಗೆ ಬಿಎಂಆರ್ಸಿಎಲ್ ಉತ್ತರ ನೀಡಿದೆ. ಈಗಾಗಲೇ ಈ ಮಾರ್ಗದ ಕಾಮಗಾರಿ ಶೇ 50 ರಷ್ಟು ಮುಗಿದಿದ್ದು ಕಾಮಗಾರಿ ಪೂರ್ಣವಾಗುವಷ್ಟರಲ್ಲಿ ಪುನೀತ್ ಹೆಸರಿಡುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಕೂಡ ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಸಿಲಿಕಾನ್ ಸಿಟಿಯ ಬಹುನಿರೀಕ್ಷಿತ ಪಿಂಕ್ ಮಾರ್ಗದ ಪಾಟರಿ ಟೌನ್ ಮೆಟ್ರೋ ಸ್ಟೇಷನ್ಗೆ ಪುನೀತ್ ರಾಜ್ಕುಮಾರ್ ಹೆಸರಿಡುವಂತೆ ಪ್ರಧಾನಿ, ಸಿಎಂ ಸೇರಿದಂತೆ ರಾಜ್ಯಪಾಲರಿಗೂ ಪತ್ರ ಬರೆದು ಮನವಿ ಮಾಡಲಾಗಿದೆ. ಮೆಟ್ರೋ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಘೋಷಣೆ ಮಾಡುವ ಎಲ್ಲಾ ಸಾಧ್ಯತೆಗಳಿವೆ.