ನವದೆಹಲಿ: ಎರಡು ದಿನಗಳ ಪ್ರವಾಸಕ್ಕಾಗಿ ಮಾರಿಷಸ್‌ಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರ ರಾಜಧಾನಿ ನವದೆಹಲಿಗೆ ಮರಳಿದರು. ಮಾರಿಷನ್ನ ರಾಷ್ಟ್ರೀಯ ದಿನದ ಮುಖ್ಯ ಅತಿಥಿಯಾಗಿ ಅವರು ಪಾಲ್ಗೊಂಡಿದ್ದರು. 2015ರಲ್ಲೂ ಕೂಡ ಆಹ್ವಾನದ ಮೇರೆಗೆ ಮೋದಿ ಮಾರಿಷಸ್‌ಗೆ ಭೇಟಿ ನೀಡಿದ್ದರು.
ಮಾರಿಷಸ್ ಪ್ರಧಾನಿ, ಜನರು ಮತ್ತು ಮಾರಿಷಸ್ ಸರ್ಕಾರದ ಪ್ರೀತಿಗಾಗಿ ಧನ್ಯವಾದ ಸಲ್ಲಿಸಿ ಮೋದಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗೆಯೇ ತಮ್ಮ ಪ್ರವಾಸದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಈ ಪ್ರವಾಸದ ವೇಳೆ ಮೋದಿ ಮಾರಿಷಸ್ನಲ್ಲಿರುವ ಭಾರತೀಯ ಸಮುದಾಯದವರು ಹಾಗೂ ಮಾರಿಷಸ್ ನಾಯಕರ ಜೊತೆಗೆ ಸಭೆ ನಡೆಸಿದ್ದರು. ಅಲ್ಲಿನ ಗಂಗಾ ತಲಾವೊಗೆ ಭೇಟಿ ನೀಡಿ, ಮಹಾಕುಂಭದಿಂದ ತೆಗೆದುಕೊಂಡು ಹೋಗಿದ್ದ ಪವಿತ್ರ ಗಂಗಾ ಜಲವನ್ನು ಅದಕ್ಕೆ ಮಿಶ್ರಣ ಮಾಡಿದ್ದರು.
“ಮಾರಿಷಸ್ನ ಗಂಗಾ ತಲಾವೊನಲ್ಲಿ ತ್ರಿವೇಣಿ ಸಂಗಮದ ಪವಿತ್ರ ಜಲವನ್ನು ಅರ್ಪಿಸಿದೆ. ಜಗತ್ತಿನಲ್ಲಿರುವ ಲಕ್ಷಾಂತರ ಹಿಂದುಗಳಿಗೆ ತ್ರಿವೇಣಿ ಸಂಗಮದ ಜಲ ವಿಶೇಷವಾಗಿದೆ. ಈ ಬಾರಿಯ ಮಹಾ ಕುಂಭಮೇಳ ಮಾರಿಷಸ್ ಸೇರಿದಂತೆ ಜಗತ್ತಿನ ಎಲ್ಲೆಡೆಯ ಯಾತ್ರಿಕರನ್ನು ಸೆಳೆದಿದೆ. ಈ ನೀರನ್ನು ಸೇರಿಸುವ ಮೂಲಕ ಗಂಗಾ, ಯಮುನಾ ಮತ್ತು ಸರಸ್ವತಿಯ ಆಶೀರ್ವಾದ ನಿಮ್ಮ ಮೇಲೆ ಸದಾ ಉಳಿಯಲಿ” ಎಂದು ಮೋದಿ ಆಶಿಸಿದ್ದಾರೆ.
ಈ ಭೇಟಿಯಲ್ಲಿ ಪ್ರಧಾನಿಗೆ ಮಾರಿಷಸ್ ದೇಶದ ಅತ್ಯುನ್ನತ ಗೌರವ ‘ಗ್ರಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದ ಸ್ಟಾರ್ ಆ್ಯಂಡ್ ಕೀ ಆಫ್‌ದ ಇಂಡಿಯನ್ ಓಷನ್ ಪ್ರಶಸ್ತಿ’ ನೀಡಿ ಪುರಸ್ಕರಿಸಲಾಯಿತು.