ನವದೆಹಲಿ, ಸೆಪ್ಟೆಂಬರ್ 1: ಚೀನಾದಲ್ಲಿ ನಡೆದ ಎಸ್ಸಿಒ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆ ವಿರುದ್ಧ ಧ್ವನಿ ಎತ್ತಿದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕೆಲ ದೇಶಗಳು ಹೇಗೆ ದ್ವಂದ್ವ ನೀತಿ ಅನುಸರಿಸುತ್ತಿವೆ ಎಂಬುದನ್ನು ಮೋದಿ ಎತ್ತಿ ತೋರಿಸಿದರು. ಮೋದಿ ಅವರ ಈ ಅನಿಸಿಕೆಗೆ ಎಸ್ಸಿಒದ ಸದಸ್ಯ ರಾಷ್ಟ್ರಗಳು ಬೆಂಬಲ ನೀಡಿವೆ. ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ಈ ರಾಷ್ಟ್ರಗಳು ಖಂಡಿಸಿವೆ.
2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರಗಾಮಿಗಳು ದಾಳಿ ಮಾಡಿ ಹಲವು ಮಂದಿಯನ್ನು ಗುಂಡಿಟ್ಟು ಬಲಿಪಡೆದಿದ್ದರು. ಶಾಂಘೈ ಸಹಕಾರ ಸಂಘಟನೆಯ ವಿವಿಧ ಸದಸ್ಯ ದೇಶಗಳು ಟಿಯಾಂಜಿನ್ ಘೋಷಣೆಯಲ್ಲಿ ಪಹಲ್ಗಾಂ ಘಟನೆಯನ್ನು ಬಲವಾಗಿ ಖಂಡಿಸಿವೆ.
‘ಸದಸ್ಯ ದೇಶಗಳು ಪಹಲ್ಗಾಂ ಉಗ್ರ ದಾಳಿ ಘಟನೆಯನ್ನು ಬಲವಾಗಿ ಖಂಡಿಸಿವೆ. ಮೃತರು ಮತ್ತು ಗಾಯಾಳುಗಳಿಗೆ ಸಾಂತ್ವನ ವ್ಯಕ್ತಪಡಿಸಿವೆ. ಇಂಥ ದಾಳಿಗಳನ್ನು ಎಸಗಿದವರು, ಬೆಂಬಲ ನೀಡಿದವರಿಗೆ ಶಿಕ್ಷೆಯಾಗಬೇಕು’ ಎಂದು ಟಿಯಾಂಜಿನ್ ಡಿಕ್ಲರೇಶನ್ನಲ್ಲಿ ಹೇಳಲಾಗಿದೆ.