ನವದೆಹಲಿ: ಸಂಸತ್ ಸದಸ್ಯರಿಗಾಗಿ 184 ಹೊಸ ಬಹುಮಹಡಿ ಫ್ಲಾಟ್ಗಳನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ರಾಷ್ಟ್ರ ರಾಜಧಾನಿಯ ಬಾಬಾ ಖರಕ್ ಸಿಂಗ್ (ಬಿಕೆಎಸ್) ಮಾರ್ಗದಲ್ಲಿ ಈ ಫ್ಲಾಟ್ ನಿರ್ಮಾಣಗೊಂಡಿದೆ.
ಈ ಕಾರ್ಯಕ್ರಮದ ವೇಳೆ ಪ್ರಧಾನಿ ಜೊತೆಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರಾದ ಮನೋಹರ್ ಲಾಲ್ ಖಟ್ಟರ್, ಕಿರಣ್ ರಿಜಿಜು ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ವಸತಿ ಸಮುಚ್ಛಯ ಸ್ಥಳದಲ್ಲಿ ಸಿಂಧೂರ (ವರ್ಮಿಲಿಯನ್) ಸಸಿಯನ್ನು ನೆಟ್ಟರು. ಈ ವೇಳೆ, ಕಟ್ಟಡ ಕಾರ್ಮಿಕರ ಜೊತೆಗೆ ಕೂಡ ಸಂಭಾಷಣೆ ನಡೆಸಿದರು.
ಬಳಿಕ ಮಾತನಾಡಿದ ಪ್ರಧಾನಿ, ಇಂದು ನಮ್ಮ ಸಂಸತ್ ಸಹೋದ್ಯೋಗಿಗಳಿಗಾಗಿ ನಿವಾಸಿ ಕಾಂಪ್ಲೆಕ್ಸ್ ಉದ್ಘಾಟನೆ ನೆರವೇರಿಸುವ ಅವಕಾಶ ಲಭ್ಯವಾಗಿದೆ. ನಾಲ್ಕು ಟವರ್ ನಿರ್ಮಾಣವಾಗಲಿದ್ದು, ಅದಕ್ಕೆ ಭಾರತದ ನಾಲ್ಕು ಪ್ರಮುಖ ನದಿಗಳಾದ ಕೃಷ್ಣಾ, ಗೋದಾವರಿ, ಕೋಸಿ, ಹೂಗ್ಲಿ ಎಂದು ಹೆಸರಿಡಲಾಗಿದೆ. ಕೆಲವರು ಕೋಸಿ ಹೆಸರಿನ ಕುರಿತು ಇರಿಸು ಮುರಿಸು ಹೊಂದಿದ್ದಾರೆ. ಅದನ್ನು ಅವರು ನದಿ ಹೆಸರಾಗಿ ನೋಡುವುದಕ್ಕಿಂತ ಬಿಹಾರ ಚುನಾವಣಾ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂದರು.