ನವದೆಹಲಿ, ಜುಲೈ 3: ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗೆಲ್ಲಾ ಹೊಸ ಮಟ್ಟದ ನಿರೀಕ್ಷೆಗಳು ಹುಟ್ಟುತ್ತವೆ. ಅಂತೆಯೇ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ಬಜೆಟ್ ತಯಾರಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಜುಲೈ ಕೊನೆಯ ವಾರದಲ್ಲಿ ಬಜೆಟ್ ಮಂಡನೆ ಆಗಬಹುದು. ಜುಲೈ 22ರಂದು ನಡೆಯಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಫೈನಾನ್ಷಿಯಲ್ ಎಕ್ಸ್ಪ್ರೆಸ್ ಪತ್ರಿಕೆಯ ವರದಿ ಪ್ರಕಾರ ಜುಲೈ 24ರಂದು ಸಂಸತ್ತಿನಲ್ಲಿ ಪೂರ್ಣ ಪ್ರಮಾಣದ ಮುಂಗಡ ಪತ್ರ ಮಂಡನೆ ಆಗಬಹುದು ಎನ್ನಲಾಗಿದೆ. ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ಈ ಅಂದಾಜು ಮಾಡಿದೆ.
ಈ ವರದಿ ಪ್ರಕಾರ ಜುಲೈ 22ಕ್ಕೆ ಬಜೆಟ್ ಅಧಿವೇಶನ ಆರಂಭವಾಗಬಹುದು. ಜುಲೈ 23ಕ್ಕೆ ಆರ್ಥಿಕ ಸಮೀಕ್ಷಾ ವರದಿ ಬಿಡುಗಡೆ ಆಗಬಹುದು. ಜುಲೈ 24ಕ್ಕೆ ಯೂನಿಯನ್ ಬಜೆಟ್ ಅನ್ನು ಪ್ರಸ್ತುತಪಡಿಸಬಹುದು ಎನ್ನಲಾಗಿದೆ. ಶೀಘ್ರದಲ್ಲೇ ದಿನಾಂಕ ಪ್ರಕಟಿಸುವ ನಿರೀಕ್ಷೆ ಇದೆ.
18ನೇ ಲೋಕಸಭೆಯ ಚೊಚ್ಚಲ ಅಧಿವೇಶನ ನಿನ್ನೆ (ಜುಲೈ 2) ಮುಕ್ತಾಯಗೊಂಡಿದೆ. ವಾಡಿಕೆ ಪ್ರಕಾರ ಎರಡನೇ ಸೆಷನ್ ಅನ್ನು 15 ದಿನಗಳ ಅಂತರದಲ್ಲಿ ಮಾಡಲಾಗುತ್ತದೆ. ಅದರಂತೆ ಜುಲೈ 18ಕ್ಕೆ ಮುಂಗಾರು ಅಧಿವೇಶನ ಶುರುವಾಗಬೇಕಾಗುತ್ತದೆ. ಅದೇ ರೀತಿ ಆದರೆ ಜುಲೈ 20, ಶನಿವಾರ ಬಜೆಟ್ ಮಂಡನೆ ಮಾಡಬೇಕಾಗುತ್ತದೆ. ಆದರೆ, ಈ ಬಾರಿ ಅಧಿವೇಶನ ತುಸು ವಿಳಂಬವಾಗಿ ಶುರುವಾಗಬಹುದು. ಜುಲೈ 22ಕ್ಕೆ ಅಧಿವೇಶನ ಆರಂಭವಾಗಿ ಜುಲೈ 24, ಬುಧವಾರದಂದು ಬಜೆಟ್ ಮಂಡನೆ ಆಗಬಹುದು ಎನ್ನುತ್ತಿದೆ ಈ ಎಫ್ಇ ವರದಿ.