ನವದೆಹಲಿ, ಆಗಸ್ಟ್ 12: ಮೊಬೈಲ್ ಬಳಕೆದಾರರ ಜೇಬಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕತ್ತರಿ ಬೀಳಲಿದೆ. ಪ್ರೀಪೇಡ್ ಮತ್ತು ಪೋಸ್ಟ್ ಪೇಡ್ ಪ್ಲಾನ್ಗಳ ದರ ಏರಿಕೆ ಆಗಬಹುದು ಎನ್ನುವ ಸುದ್ದಿ ಇದೆ. ಮುಂದಿನ ಆರು ತಿಂಗಳೊಳಗೆ ಟೆಲಿಕಾಂ ಕಂಪನಿಗಳು ದರ ಏರಿಕೆ ಮಾಡಲು ಅಣಿಗೊಂಡಿವೆ. ಕಳೆದ ವರ್ಷ (2024) ಎಲ್ಲಾ ಟೆಲಿಕಾಂ ಕಂಪನಿಗಳು ಶೇ. 15ರಿಂದ 20ರಷ್ಟು ಏರಿಕೆ ಮಾಡಿದ್ದವು. ಈ ಬಾರಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಆಗುವುದಿಲ್ಲ. ಶೇ. 10-15ರಷ್ಟು ಏರಿಕೆ ಅಗಬಹುದು ಎಂದು ಹೇಳಲಾಗುತ್ತಿದೆ.
ಈ ಹಿಂದೆ ಎರಡು ವರ್ಷಕ್ಕೊಮ್ಮೆ ಮೊಬೈಲ್ ಟ್ಯಾರಿಫ್ಗಳನ್ನು ಪರಿಷ್ಕರಿಸಲಾಗುತ್ತಿತ್ತು. ಈಗ ಹೆಚ್ಚೆಚ್ಚು ಬಾರಿ ದರ ಪರಿಷ್ಕರಣೆ ಆಗಬಹುದು. ಹಾಗೆಯೇ, ಟೆಲಿಕಾಂ ಕಂಪನಿಗಳಿಗೆ ಪ್ರತೀ ಬಳಕೆದಾರರಿಂದ ಸಿಗುವ ಆದಾಯ ಮತ್ತಷ್ಟು ಹೆಚ್ಚಬಹುದು ಎನ್ನುವ ನಿರೀಕ್ಷೆಯೂ ಇದೆ. 2024-25ರಲ್ಲಿ ಪ್ರತೀ ಬಳಕೆದಾರರಿಗೆ ಸರಾಸರಿ ಆದಾಯ 200 ರೂ ಇತ್ತು. 2025-26ರಲ್ಲಿ ಇದು 220 ರೂಗೆ ಏರಿಕೆ ಆಗಬಹುದು ಎನ್ನುವುದು ವಿಶ್ಲೇಷಕರ ಅಂದಾಜು. ಆದರೆ, ವಿಶ್ವದ ಹೆಚ್ಚಿನ ದೇಶಗಳಲ್ಲಿ ಟೆಲಿಕಾಂ ಕಂಪನಿಗಳಿಗೆ ಇದಕ್ಕಿಂತ ಹೆಚ್ಚಿನ ಆದಾಯ ಇದೆ.