ಬೆಂಗಳೂರು,09: ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತ ಮಹಿಳೆಯನ್ನು ಅಪಹರಿಸಿದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಹೆಚ್. ಡಿ. ರೇವಣ್ಣ ಅವರ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೋಮವಾರಕ್ಕೆ ಮುಂದೂಡಿದೆ.
ಜಾಮೀನು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಹೆಚ್.ಡಿ. ರೇವಣ್ಣ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಯುವುದು ಅನಿವಾರ್ಯವಾಗಿದೆ. ಇಂದು ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ಎಸ್ಐಟಿ ಪರ ವಕೀಲೆ ಜಾಯ್ನಾ ಕೊಠಾರಿ ವಾದ ಮಂಡಿಸಿ, ”ರೇವಣ್ಣ ಅವರ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದರು. ವಿಳಂಬದ ಉದ್ದೇಶವಿಲ್ಲ, ನಮ್ಮ ವಾದ ಮಂಡನೆಗೆ ಕಾಲಾವಕಾಶ ನೀಡಬೇಕು” ಎಂದು ಮನವಿ ಮಾಡಿದರು. ಇದನ್ನು ತಿರಸ್ಕರಿಸಿದ ವಿಶೇಷ ನ್ಯಾಯಾಲಯ, ”ನೀವೂ ಹಿರಿಯ ವಕೀಲರಿದ್ದೀರಿ. ಬೇರೆ-ಬೇರೆ ಪ್ರಕರಣಗಳಲ್ಲಿ ವಾದ ಮಂಡನೆಗೆ ಕಾಲಾವಕಾಶ ನೀಡಲಾಗಿಲ್ಲ” ಎಂದಿತು. ವಾದ – ಪ್ರತಿವಾದ ಆಲಿಸಿದ ನ್ಯಾಯಾಲಯವು ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮೂಂದೂಡಿದೆ.