ರಾಜ್ಯ ಸರ್ಕಾರಿ ನೌಕರರ ಹಳೆಯ ಪಿಂಚಣಿ ಯೋಜನೆ ಜಾರಿಗೆ ಕ್ರಮ: ಶಾಸಕ ನಾರಾ ಭರತ್ ರೆಡ್ಡಿ

Sandeep Malannavar
ರಾಜ್ಯ ಸರ್ಕಾರಿ ನೌಕರರ ಹಳೆಯ ಪಿಂಚಣಿ ಯೋಜನೆ ಜಾರಿಗೆ ಕ್ರಮ: ಶಾಸಕ ನಾರಾ ಭರತ್ ರೆಡ್ಡಿ
WhatsApp Group Join Now
Telegram Group Join Now
ಬಳ್ಳಾರಿ, ಫೆ.17: ರಾಜ್ಯ ಸರ್ಕಾರಿ ನೌಕರರ ಬಹುನಿರೀಕ್ಷಿತ ಬೇಡಿಕೆಯಾಗಿರುವ ಹಳೆಯ ಪಿಂಚಣಿ ಯೋಜನೆಯನ್ನು ಮತ್ತೆ ಮರಳಿ ಜಾರಿಗೆ ತರಲು ರಾಜ್ಯ ಸರ್ಕಾರ ಕ್ರಮ ವಹಿಸಲಿದೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಮಂಗಳವಾರ ಜಿಲ್ಲಾಡಳಿತ, ಜಿಪಂ, ಯುವ ಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸರ್ಕಾರಿ ನೌಕರರಿಗಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಳೆಯ ಪಿಂಚಣಿ ಯೋಜನೆಯ ಜಾರಿಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಸಮಿತಿಯನ್ನು ರಚಿಸಿ, ಐದು ರಾಜ್ಯಗಳಲ್ಲಿರುವ ವ್ಯವಸ್ಥೆಯನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಲು ಸೂಚಿಸಿದ್ದಾರೆ, ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ, ಈ ವರ್ಷದ ಬಜೆಟ್ ಅಧಿವೇಶನದ ವೇಳೆ ನಾನು, ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ಶಾಸಕ ಜೆ.ಎನ್.ಗಣೇಶ್ ಒಟ್ಟಾಗಿ ಸರ್ಕಾರದ ಗಮನ ಸೆಳೆಯುತ್ತೇವೆ ಎಂದರು.
ಜಿಲ್ಲೆಯಲ್ಲಿ ಸುಸಜ್ಜಿತವಾದ ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ಕ್ರಮ ವಹಿಸುತ್ತೇನೆ, ಇದಲ್ಲದೇ ಸರ್ಕಾರಿ ನೌಕರರ ಗೃಹ ನಿರ್ಮಾಣಕ್ಕಾಗಿ ಖರೀದಿಯಾಗಿರುವ ಜಮೀನಿಗೆ ಸಂಬಂಧಿಸಿದ ಅನುಮೋದನೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ಸರ್ಕಾರಿ ನೌಕರರು ದಿನವಿಡೀ ಕೆಲಸ ಮಾಡುತ್ತಾರೆ, ಜನರ ಸೇವೆಯನ್ನು ದೇವರ ಸೇವೆ ಎಂದು ತಿಳಿದು ಮಾಡುತ್ತಾರೆ, ಒಬ್ಬ ಸಾಮಾನ್ಯ ವ್ಯಕ್ತಿಗೆ ಸರ್ಕಾರಿ ಕಚೇರಿಯಲ್ಲಿ ಒಂದೇ ಕೆಲಸ; ಆದರೆ ಒಬ್ಬ ಸರ್ಕಾರಿ ನೌಕರ ಸಾವಿರಾರು ಜನರ ಕೆಲಸ ಮಾಡಬೇಕು, ಹೀಗಾಗಿ ಒತ್ತಡದ ನಡುವೆ ಕೆಲಸ ಮಾಡುವ ನಿಮಗೆ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆ ಉತ್ಸಾಹವನ್ನು ತರುತ್ತದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿವಿಧ ತಾಲೂಕುಗಳಿಂದ ಬಂದಿದ್ದ ತಂಡಗಳು ಪಥ ಸಂಚಲನ ನಡೆಸಿ, ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದವು.
ಈ ವೇಳೆ ಹಲವು ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಜಿಲ್ಲಾ ಸರ್ಜನ್ ಡಾ.ಬಸರೆಡ್ಡಿ, ಜಿಲ್ಲಾ ಆರೋಗ್ಯ-ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು, ಎಡಿಎಸ್ಪಿ ರವಿಕುಮಾರ್, ಶಿಕ್ಷಕರ ಸಂಘದ ಮಲ್ಲೇಶ್, ಸುರೇಶ್, ಎಲ್.ಎನ್.ಶಾಸ್ತ್ರಿ ಪಾಲಿಕೆಯ ಸದಸ್ಯರಾದ ಮಿಂಚು ಸೀನಾ, ಎಂ.ರಾಜೇಶ್ವರಿ, ಕಾಂಗ್ರೆಸ್ ಮುಖಂಡ ಸುಬ್ಬರಾಯುಡು ಸೇರಿದಂತೆ ಹಲವರು ಹಾಜರಿದ್ದರು.
WhatsApp Group Join Now
Telegram Group Join Now
Share This Article