ಬಳ್ಳಾರಿ, ಮಾ.11: ವಡ್ಡರಬಂಡೆ ಶಾದಿ ಮಹಲ್ ಕಾಮಗಾರಿ ಶೀಘ್ರ ಆರಂಭಿಸಲಾಗುವುದು ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಮಂಗಳವಾರ ನಗರದ 3ನೇ ವಾರ್ಡ್ ವ್ಯಾಪ್ತಿಯ ಮುಸ್ಲಿಂ ಖಬರಸ್ತಾನದ ಕಂಪೌಂಡ್ ಹಾಗೂ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿದರು.
ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರ ಸಹಯೋಗದಲ್ಲಿ ಈಗಾಗಲೇ ತೀರ್ಮಾನಿಸಿದಂತೆ ನಗರದಲ್ಲಿ ಒಟ್ಟು ಎರಡು ಶಾದಿ ಮಹಲ್ ನಿರ್ಮಾಣ ಕಾರ್ಯ ನಡೆಯಲಿದೆ. ಇದರಿಂದ ಬಡವರ ಮಕ್ಕಳ ಮದುವೆಗೆ ಅನುಕೂಲ ಆಗಲಿದೆ ಎಂದರು.
ನಗರದ ಮುಸ್ಲಿಂ ಸಮುದಾಯದ ಯುವಕರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಬೇಕೆಂಬುದು ನಮ್ಮೆಲ್ಲರ ಆಸೆ ಇತ್ತು, ಅದೇ ರೀತಿ ಇಂದು ನಗರದ ಈದ್ಗಾ ಹಾಗೂ ಖಬರಸ್ತಾನದ ಸ್ವಚ್ಛತೆ, ರಕ್ಷಣೆ ಹಾಗೂ ಹಸೀರಿಕರಣದ ಕೆಲಸವನ್ನು ಯುವಕರು ಮಾಡಿದ್ದಾರೆ ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿ, ಇದೇ ನಗರದ ಜನ ವಸತಿ ಬಡಾವಣೆಗಳಲ್ಲಿ ಹಸೀರಕಣಕ್ಕೆ ನಾವೆಲ್ಲ ಶ್ರಮಿಸೋಣ ಎಂದರು.
ಭೂಮಿ ಪೂಜೆಯ ನಂತರ ಯೂತ್ ರೆವಲ್ಯೂಷನ್ ಟೀಮಿನ ಸದಸ್ಯರನ್ನು ಶಾಸಕರು ಸನ್ಮಾನಿಸಿದರು.
ಈ ಸಂದರ್ಭ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಹುಮಾಯೂನ್ ಖಾನ್, ಪಾಲಿಕೆಯ ಸದಸ್ಯರಾದ ಎಂ.ಪ್ರಭಂಜನಕುಮಾರ್, ನಾಜು, ಆಸಿಫ್, ಕಾಂಗ್ರೆಸ್ ಮುಖಂಡರಾದ ಆಯಾಜ್ ಅಹ್ಮದ್, ದಾದಾಭಾಯ್, ಕಣೇಕಲ್ ಮೆಹಬೂಬಸಾಬ, ಹುಸೇನ್ ಪೀರಾ, ಯೂನುಸ್ ಭಾಯ್, ಮಹಮ್ಮದ್ ಭಾಯ್, ಉಸ್ಮಾನ್, ಅನ್ವರ್, ಅರ್ಷದ್, ಅತೀಕ್, ತೌಸೀಫ್, ಸಮೀರ್, ಅಫಾಕ್, ನೂರ್, ಫರಾಜ್, ತಬರೇಜ್ ಮತ್ತಿತರರು ಹಾಜರಿದ್ದರು.


