ಕಿಡ್ನ್ಯಾಪ್​ಗೂ ನನಗೂ ಸಂಬಂಧವಿಲ್ಲ ಬಿಟ್ಟುಬಿಡಿ : ಎಸ್​ಐಟಿ ವಿಚಾರಣೆಯಲ್ಲಿ ಶಾಸಕ ಹೆಚ್​ಡಿ ರೇವಣ್ಣ ಅಳಲು

Ravi Talawar
ಕಿಡ್ನ್ಯಾಪ್​ಗೂ ನನಗೂ ಸಂಬಂಧವಿಲ್ಲ ಬಿಟ್ಟುಬಿಡಿ : ಎಸ್​ಐಟಿ ವಿಚಾರಣೆಯಲ್ಲಿ ಶಾಸಕ ಹೆಚ್​ಡಿ ರೇವಣ್ಣ ಅಳಲು
WhatsApp Group Join Now
Telegram Group Join Now

ಬೆಂಗಳೂರು, ಮೇ 6: ಲೈಂಗಿಕ ದೌರ್ಜನ್ಯ ಮತ್ತು ಕಿಡ್ನ್ಯಾಪ್ ಕೇಸ್​ನಲ್ಲಿ ಎಸ್​ಐಟಿ ಬಂಧನದಲ್ಲಿರುವ ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣ  ವಿಚಾರಣೆ ತೀವ್ರಗೊಂಡಿದೆ. ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಮನೆಯಿಂದ ರೇವಣ್ಣರನ್ನು ಬಂಧಿಸಿದ್ದ ಎಸ್​ಐಟಿ (SIT) ನಿನ್ನೆ ಸಂಜೆ ಜಡ್ಜ್ ಎದುರು ಹಾಜರುಪಡಿಸಿತ್ತು. ಈ ವೇಳೆ ರಾಜಕೀಯ ಭವಿಷ್ಯವನ್ನು ನೆನಪಿಸಿಕೊಂಡು ರೇವಣ್ಣ ಕೈ ಮುಗಿದು ಕಣ್ಣೀರು ಹಾಕಿದ್ದರು. ರಾಜಕೀಯ ಷಡ್ಯಂತ್ರ ನಡೆಸಿ ನನ್ನ ಬಂಧನವಾಗಿದೆ ಅಂತ ಅಳಲು ತೋಡಿಕೊಂಡಿದ್ದರು. ಸದ್ಯ 4 ದಿನಗಳ ಕಾಲ ಎಸ್​ಐಟಿ ಕಸ್ಟಡಿಯಲ್ಲಿರುವ ರೇವಣ್ಣಗೆ ಎಸ್​​ಐಟಿ ಅಧಿಕಾರಿಗಳು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.

ಮಹಿಳೆಯನ್ನು ಬಲವಂತವಾಗಿ ದೈಹಿಕವಾಗಿ ಬಳಸಿಕೊಂಡಿದ್ದರು ಎಂದು ಎಸ್​ಐಟಿ ಹೇಳಿಕೆ ದಾಖಲಿಸಿಕೊಂಡಿದೆ. ಆದ್ರೆ, ಎಸ್​​ಐಟಿ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡದ ರೇವಣ್ಣ, ಕಿಡ್ನ್ಯಾಪ್​​ಗೂ ನನಗೂ ಸಂಬಂಧವಿಲ್ಲ. ಕಿಡ್ನ್ಯಾಪ್ ಮಾಡಿ ಅಂತಾ ಯಾರಿಗೂ ಹೇಳಿಲ್ಲ ಅಂತಾ ಒಂದೇ ಉತ್ತರ ನೀಡಿದ್ದಾರೆ.

ಇಷ್ಟೇ ಅಲ್ಲ ನನಗೂ ಕಿಡ್ನ್ಯಾಪ್​ಗೂ ಸಂಬಂಧವಿಲ್ಲ ಎಂದಿರುವ ರೇವಣ್ಣ, ಸ್ವಇಚ್ಛಾ ಹೇಳಿಕೆಗೆ ಸಹಿ ಹಾಕಲು ಹಿಂದೇಟು ಹಾಕಿದ್ದಾರೆ. ಮಹಿಳೆ ಕಿಡ್ನ್ಯಾಪ್ ಕೇಸ್​​ನಲ್ಲಿ ಬಂಧನವಾಗಿರುವ ರೇವಣ್ಣ ಕಸ್ಟಡಿ ವೇಳೆಯಲ್ಲಿ ರೇವಣ್ಣ ಬೇಲ್ ಅರ್ಜಿ ಸಲ್ಲಿಸಬಹುದು. ಕಸ್ಟಡಿ ಅವಧಿ ಮುಗಿದ ಬಳಿಕವೇ ಬೇಲ್ ಬಗ್ಗೆ ತೀರ್ಮಾನವಾಗಲಿದೆ. ಕಸ್ಟಡಿ ಅವಧಿ ನಂತರ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸ್​ಐಟಿ ಸಿದ್ಧತೆ ಮಾಡಿಕೊಂಡಿದೆ. ಬೇಲ್ ಅರ್ಜಿಗೆ ಎಸ್​ಐಟಿ ಆಕ್ಷೇಪಣೆಯನ್ನು ಕೋರ್ಟ್ ಪರಿಗಣಿಸಲಿದೆ. ಎರಡೂ ಕಡೆ ವಾದಮಂಡನೆ ನಂತರವೇ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.

ಈ ಎಲ್ಲ ಪ್ರಕ್ರಿಯೆಯು ಕನಿಷ್ಠ ಒಂದು ವಾರ ನಡೆಯಬಹುದು. ಬೇಲ್ ಸಿಕ್ಕರೆ ಸೆರೆವಾಸದಿಂದ ರೇವಣ್ಣ ರಿಲೀಸ್ ಆಗ್ತಾರೆ. ಅಕಸ್ಮಾತ್ ಜನಪ್ರತಿನಿಧಿಗಳ ಕೋರ್ಟ್​ನಲ್ಲಿ ಬೇಲ್ ಸಿಗದಿದ್ದರೆ ರೇವಣ್ಣ ಹೈಕೋರ್ಟ್ ಮೊರೆ ಹೋಗಬಹುದು. ಹೈಕೋರ್ಟ್ ನಲ್ಲೂ ಬೇಲ್ ಸಿಗದಿದ್ದರೆ ಸುಪ್ರೀಂಗೆ ಮೊರೆ ಹೋಗಬಹುದು. ಆದ್ರೆ ಜಾಮೀನು ಸಿಗುವವರೆಗೆ ರೇವಣ್ಣ ಬಂಧನದಲ್ಲಿರಬೇಕಾಗಿದೆ.

ಎಸ್​ಐಟಿ ಬಂಧನದ ಬಳಿಕ ರೇವಣ್ಣ ಮಾನಸಿಕವಾಗಿ ಕುಗ್ಗಿದ್ದಾರೆ. ಪ್ರತಿದಿನ 9.30ರಿಂದ 10.30ರ ಸಮಯದಲ್ಲಿ ಒಂದು ಗಂಟೆ ವಕೀಲರ ಭೇಟಿಗೆ ಅವಕಾಶ ಇದೆ. ವಕೀಲರ ಭೇಟಿಗೆ ಅವಕಾಶ ನೀಡಿ ಜಡ್ಜ್ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆ ಇಂದು ಸಿಐಡಿ ಎಸ್​ಐಟಿ ಕಚೇರಿಯಲ್ಲಿ ಭೇಟಿಗೆ ಅನುವು ಮಾಡಿಕೊಡಲಾಗಿದೆ.

ಇನ್ನು ಹೊಳೆನರಸೀಪುರದಲ್ಲಿ ದೂರು ನೀಡಿದ್ದ ಸಂತ್ರಸ್ತ ಮಹಿಳೆಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ರೇವಣ್ಣ ನಿವಾಸಕ್ಕೆ ಕರೆತಂದು ಸ್ಥಳ ಮಹಜರು ಮಾಡಲಾಯ್ತು. ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಪಟ್ಟಂತೆ ಸಂತ್ರಸ್ತೆಯಿಂದ ಎಸ್​ಐಟಿ ಅಧಿಕಾರಿಗಳು ಹೇಳಿಕೆ ದಾಖಲು ಮಾಡಿದ್ರು. ಸಂತ್ರಸ್ತೆ ಹೇಳಿಕೆ ಆಧರಿಸಿ ಮನೆಯಲ್ಲಿ ಸಂಪೂರ್ಣ ಮಹಜರು ಮಾಡಲಾಯ್ತು. ನಾಲ್ವರು ಮಹಿಳಾ ಅಧಿಕಾರಿಗಳು ಸೇರಿ 6 ಅಧಿಕಾರಿಗಳ ತಂಡ ಮಹಜರು ನಡೆಸಿದರು.

ರೇವಣ್ಣರನ್ನ ಇಂದು ಹಾಸನ ಅಥವಾ ಕೆ.ಆರ್. ನಗರಕ್ಕೆ ಕರೆದೊಯ್ದು ಸ್ಥಳ ಮಹಜರು ಮಾಡುವ ಸಾಧ್ಯತೆಯಿದೆ. ಮಹಿಳೆಯನ್ನು ಕರೆದುಕೊಂಡು ಹೋಗಿದ್ದ ಸ್ಥಳ, ಕೂಡಿಟ್ಟ ಸ್ಥಳ, ಮಹಿಳೆಯ ಕರೆತಂದ ಸತೀಶ್ ಬಾಬು-ರೇವಣ್ಣ ಭೇಟಿಯಾದ ಗೌಪ್ಯ ಸ್ಥಳದ ಬಗ್ಗೆಯೂ ತನಿಖೆ ನಡೆಯಲಿದೆ.

 

 

WhatsApp Group Join Now
Telegram Group Join Now
Share This Article