ಹಸಿರು ಕ್ರಾಂತಿ ವರದಿ
ಜಮಖಂಡಿ: ಕೇವಲ ಜೈಕಾರದಿಂದ ಧರ್ಮನಿಷ್ಠೆ ತೋರಿಸುವುದು ಸಲ್ಲದು. ಬದಲಾಗಿ ಧರ್ಮದ ಹಾದಿಯಲ್ಲಿ ನಡೆದು ಧರ್ಮನಿಷ್ಠರಾಗಿ ಧರ್ಮವನ್ನು ಉಳಿಸಬೇಕು ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ಐತಿಹಾಸಿಕ ಓಲೆಮಠದ ಡಾ.ಅಭಿನವಕುಮಾರ ಚೆನ್ನಬಸವ ಮಹಾಸ್ವಾಮಿಗಳ ಪ್ರಥಮ ಪುಣ್ಯ ಸ್ಮರಣೋತ್ಸವ ಅಂಗವಾಗಿ ಶುಕ್ರವಾರ ಸಂಜೆ ಓಲೆಮಠದಲ್ಲಿ ನಡೆದ ಶ್ರೀಗಳ ಗದ್ದುಗೆ ಉದ್ಘಾಟನೆ ಮತ್ತು ಧರ್ಮಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಧರ್ಮ ಉಳಿಯಬೇಕಾದರೆ ಮಠಮಾನ್ಯಗಳು ಉಳಿದು ಬೆಳೆಯಬೇಕು. ಮಠಮಾನ್ಯಗಳಲ್ಲಿ ನಿರಂತರವಾಗಿ ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಿಂತನೆಗಳು ನಡೆಯಬೇಕು. ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ. ಜಂಗಮ ಸಮಾಜದ ಮಹಾನ್ ಶಕ್ತಿ ಎಂದರು.
ಬೀಳಗಿಯ ಕಲ್ಮಠದ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಗಿಡಮರಗಳು ತಮಗಾಗಿ ಅಲ್ಲ ಪರರಿಗಾಗಿ ಫಲ ಬಿಡುತ್ತವೆ. ನದಿಗಳು ತಮಗಾಗಿ ಹರಿಯುವುದಿಲ್ಲ, ಪರರಿಗಾಗಿ ಹರಿಯುತ್ತವೆ. ಹಾಗೆಯೆ ಮನುಷ್ಯನು ಕೂಡ ಪರೋಪಕಾರಿ ಬದುಕು ಬದುಕಬೇಕು ಎಂದು ಆಶೀರ್ವಚನ ನೀಡಿದರು.
ಡಾ.ಚೆನ್ನಬಸವ ಶ್ರೀಗಳು ಇಲ್ಲವೆಂಬ ಕೊರತೆಯನ್ನು ಆನಂದ ದೇವರು ಶ್ರೀಗಳು ನೀಗಿಸುತ್ತಿದ್ದಾರೆ. ಸ್ವಾಮಿ ಮಠದ ಒಡೆಯನಲ್ಲ. ಸ್ವಾಮಿ ಮಠದ ನಿಷ್ಠಾವಂತ ಸೇವಕ ಎಂಬ ಮಾತಿನಂತೆ ಶ್ರೀಗಳು ನಡೆಯುತ್ತಿದ್ದಾರೆ. ಗುರುವಾಗಿ, ಅರಿವಿನ ಕಣ್ಣಾಗಿ ಕಾಯಕ ನಿರ್ವಹಿಸುತ್ತಿದ್ದಾರೆ ಎಂದರು.
ರುದ್ರಾವಧೂತ ಮಠದ ವೇದಾಂತಾಚಾರ್ಯ ಸಹಜಾನಂದ ಅವಧೂತರು ಸಾನ್ನಿಧ್ಯ ವಹಿಸಿ ಮಾತನಾಡಿ, ಧರ್ಮವನ್ನು ರಕ್ಷಿಸುವವರನ್ನು ಧರ್ಮ ರಕ್ಷಿಸುತ್ತದೆ. ಸುಖವಾಗಿ ಇರಬೇಕೆನ್ನುವ ಅಪೇಕ್ಷೆ ಎಲ್ಲರಿಗೂ ಇರುತ್ತದೆ. ಆದರೆ, ಸುಖ ಸುಮ್ಮನೆ ಸಿಗುವುದಿಲ್ಲ. ಸುಖ ದೊರೆಯಬೇಕಾದರೆ ಧರ್ಮದ ಕಾರ್ಯ ಮಾಡಬೇಕು ಎಂದು ಆಶೀರ್ವಚನ ನೀಡಿದರು.
ಓಲೆಮಠದ ಆನಂದ ದೇವರು ನೇತೃತ್ವ ವಹಿಸಿ ಮಾತನಾಡಿ, ಎಲ್ಲ ಸದ್ಭಕ್ತರ ಹೃದಯದಲ್ಲಿ ಡಾ.ಚೆನ್ನಬಸವ ಮಹಾಸ್ವಾಮಿಗಳು ಸ್ಥಾನ ಪಡೆದಿದ್ದಾರೆ. ಅವರನ್ನು ನೆನೆದು ಕಣ್ಣೀರು ಹಾಕುವ ಸದ್ಭಕ್ತರು ಇದ್ದಾರೆ. ಶ್ರೀಗಳು ಸದ್ಭಕ್ತರನ್ನು ಶ್ರೀಮಠದ ಆಸ್ತಿಯನ್ನಾಗಿ ಬಿಟ್ಟು ಹೋಗಿದ್ದಾರೆ. ಸ್ವಾಮಿಗಳ ಹಾಗೂ ಸದ್ಭಕ್ತರ ನಡುವಿನ ಸಂಬAಧ ತಾಯಿ-ತಂದೆ-ಮಕ್ಕಳ ಸಂಬAಧವಿದ್ದAತೆ ಎಂದರು.
ಗದ್ದುಗೆ ನಿರ್ಮಾಣ ಸೇವೆಗೈದ ಸಿಆರ್‌ಒ ರಾಜ್ಯ ಘಟಕದ ಅಧ್ಯಕ್ಷ ರಾಜು ಗಸ್ತಿ, ಮೂರ್ತಿ ನಿರ್ಮಾಣ ಸೇವೆಗೈದ ವೀರಭದ್ರಯ್ಯಾ ಗಾರವಾಡಮಠ, ಕಂಪೌAಡ್ ಗೋಡೆ ನಿರ್ಮಾಣ ಸೇವೆಗೈದ ಸಿದ್ದಯ್ಯ ಕಲ್ಕತ್ತಿಮಠ, ವಾದ್ಯಸೇವೆಗೈದ ಪಂಡಿತ ಭಜಂತ್ರಿ, ಪ್ರಕಾಶ ಭಜಂತ್ರಿ ಅವರನ್ನು ಶ್ರೀಮಠದ ಪರವಾಗಿ ವಿಶೇಷವಾಗಿ ಸನ್ಮಾನಿಸಲಾಯಿತು.
ಸಾಹಿತಿ, ಅಂಕಣಕಾರ ರುದ್ರಗೌಡ ಪಾಟೀಲ ವಿರಚಿತ ‘ಪ್ರಚಲಿತ’, ‘ಹೇಳತೀನಿ ಕೇಳ’, ‘ಸಂಜೀ ಕಟ್ಟೆ ಪುರಾಣ’ ಈ ಮೂರು ಕೃತಿಗಳ ಲೋಕಾರ್ಪಣೆ ಜರುಗಿತು. ವಿಧಾನ ಪರಿಷತ್ ಮಾಜಿ ಶಾಸಕ ಜಿ.ಎಸ್. ನ್ಯಾಮಗೌಡ, ನಗರಸಭೆ ಅಧ್ಯಕ್ಷ ಈಶ್ವರ ವಾಳೆನ್ನವರ, ನಾಡೋಜ ಡಾ.ಎಚ್.ಜಿ. ದಡ್ಡಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಇದ್ದರು.
ಮರೇಗುದ್ದಿಯ ವಿರಕ್ತಮಠದ ಗುರುಮಹಾಂತ ಮಹಾಸ್ವಾಮಿಗಳು, ಉಗುರಗೋಳ ನಿರ್ವಾಣೇಶ್ವರಮಠದ ಮಹಾಂತ ಮಹಾಸ್ವಾಮಿಗಳು, ಜಮಖಂಡಿಯ ಮುತ್ತಿನಕಂತಿ ಹಿರೇಮಠದ ಶಿವಲಿಂಗ ಮಹಾಸ್ವಾಮಿಗಳು, ಸಿಂದಗಿ ಸಾರಂಗಮಠದ ಡಾ.ವಿಶ್ವಪ್ರಭು ಮಹಾಸ್ವಾಮಿಗಳು, ಮುತ್ತೂರಿನ ರಾಚೋಟೇಶ್ವರ ವಿರಕ್ತಮಠದ ಗುರುಸಿದ್ಧೇಶ್ವರ ಮಹಾಸ್ವಾಮಿಗಳು, ಕಡಕೋಳ ಬಬಲಾದಿಮಠದ ಸಿದ್ದಲಿಂಗಯ್ಯ ಮಹಾಸ್ವಾಮಿಗಳು, ಶೂರ್ಪಾಲಿಯ ಸಾರಂಗಮಠದ ಸುನಂದಮ್ಮತಾಯಿ, ಕಡಪಟ್ಟಿಯ ಜಗದೀಶ್ವರಮಠದ ಪ್ರಮಿಳಾತಾಯಿ, ರುದ್ರಾವಧೂತ ಮಠದ ಕೃಷ್ಣಾನಂದ ಅವಧೂತರು, ಯೋಗಗುರು ನಿರಂಜನ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಝುಂಜರವಾಡದ ಬಸವರಾಜೇಂದ್ರ ಶರಣರು ಸ್ವಾಗತಿಸಿ ನಿರೂಪಿಸಿದರು. ವಕೀಲ ಎನ್.ಎಸ್. ದೇವರವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಸ್ವತಿ ಸಬರದ(ಹೆಗಡಿ), ರೇಖಾ ಬಿರಾದಾರ, ಹನಮಂತ(ತಬಲಾ) ಸಂಗೀತ ಸೇವೆ ಸಲ್ಲಿಸಿದರು. ಕಲ್ಯಾಣಮಠದ ಗೌರಿಶಂಕರ ಮಹಾಸ್ವಾಮಿಗಳು ಮಂಗಲಗೀತೆ ಹಾಡಿದರು.
ಇದಕ್ಕೂ ಮೊದಲು ಬಸವನ ಬಾಗೇವಾಡಿಯಿಂದ ಆಗಮಿಸಿದ ಡಾ.ಚೆನ್ನಬಸವ ಮಹಾಸ್ವಾಮಿಗಳ ಮೂರ್ತಿಯನ್ನು ನಗರದ ಬಸವೇಶ್ವರ ವೃತ್ತದ ಹತ್ತಿರ ಭಕ್ತಿಯಿಂದ ಬರಮಾಡಿಕೊಳ್ಳಲಾಯಿತು. ಡೊಳ್ಳು ಹಾಗೂ ಇತರ ವಾದ್ಯಮೇಳದೊಂದಿಗೆ ಶ್ರದ್ಧಾಭಕ್ತಿ, ಸಡಗರ, ಸಂಭ್ರಮದಿAದ ಮೂರ್ತಿಯ ಭವ್ಯಮೆರವಣಿಗೆ ಆರಂಭಿಸಲಾಯಿತು. ವಚನ ಪುಸ್ತಕ ತಲೆ ಮೇಲೆ ಹೊತ್ತ ಸುಮಂಗಲೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿಬಂದ ಮೆರವಣಿಗೆ ಓಲೆಮಠ ತಲುಪಿತ್ತು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಬಸವ ಕೇಂದ್ರದ ಅಧ್ಯಕ್ಷ ರವಿ ಯಡಹಳ್ಳಿ, ವಕೀಲ ಸಿ.ಎಸ್. ಬಾಂಗಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ತಳಕೇರಿ, ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ, ಕಸ್ತೂರಿ ಜೈನಾಪುರ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸದ್ಭಕ್ತರು ಮೆರವಣಿಗೆಯಲ್ಲಿ ಸಾಗಿದ್ದರು.


