ಬೆಂಗಳೂರು: ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಬಿ.ನಾಗೇಂದ್ರರನ್ನು ಇಡಿ ವಶಕ್ಕೆ ಪಡೆದ ಬೆನ್ನಲ್ಲೇ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ಗಾಗಿ ಹುಡುಕಾಟ ನಡೆಸುತ್ತಿತ್ತು. ಆದರೆ, ಎಲ್ಲೂ ಕಾಣಿಸಿಕೊಂಡಿರದಿದ್ದ ಬಸನಗೌಡ ದದ್ದಲ್ ಇದೀಗ ಎಸ್ಐಟಿ ಕಚೇರಿ ಬಳಿ ಪ್ರತ್ಯಕ್ಷವಾಗಿದ್ದಾರೆ. ಇಡಿ ವಶಕ್ಕೆ ಪಡೆದರೆ ಸಂಕಷ್ಟ ಎದುರಾಗಬಹುದು ಎಂದು ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದಾರೆ.
ವಾಲ್ಮೀಕಿ ನಿಗಮ ಅಕ್ರಮ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೊಟೀಸ್ ನೀಡಿದ ಹಿನ್ನೆಲೆಯಲ್ಲಿ ದದ್ದಲ್ ಹಾಜರಾಗಿದ್ದಾರೆ. ಇದಕ್ಕೂ ಮೊದಲು ಯಲಹಂಕ ಬಳಿ ಇರುವ ಬಸನಗೌಡ ದದ್ದಲ್ ಮನೆಗೆ ಇಡಿ ಅಧಿಕಾರಿಗಳು ತೆರಳಿದ್ದರು. ಅವರು ಮನೆಯಲ್ಲಿರದ ಕಾರಣ ಇಡಿ ಅಧಿಕಾರಿಗಳು ವಾಪಸ್ ಆಗಿದ್ದರು. ನಂತರ ವಿಧಾನಸೌಧ ಹಾಗೂ ಶಾಸಕರ ಭವನದಲ್ಲಿ ಕೂಡ ಅವರಿಗಾಗಿ ಇಡಿ ಅಧಿಕಾರಿಗಳು ಹುಡುಕಾಟ ನಡೆಸಿದ್ದರು. ಈ ವೇಳೆ ಎಲ್ಲೂ ಕಾಣಿಸಿಕೊಳ್ಳದಿದ್ದ ದದ್ದಲ್ ಅವರು ನೇರವಾಗಿ ಎಸ್‌ಐಟಿ ಕಚೇರಿಗೆ ತೆರಳಿದ್ದಾರೆ.