ನವದೆಹಲಿ,ಏ.12:ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಪ್ರಧಾನಿ ನರೇಂದ್ರ ಮೋದಿಯನ್ನು ಜೈಲಿಗಟ್ಟುತ್ತೆ ಎಂದು ಹೇಳಿಕೆ ನೀಡಿದ್ದ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪುತ್ರಿ ಮಿಸಾ ಭಾರ್ತಿ ಯೂಟರ್ನ್ ಹೊಡೆದಿದ್ದಾರೆ. ನಾನು ಹಾಗೆ ಹೇಳಿಯೇ ಇಲ್ಲ ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಎಂದಿದ್ದಾರೆ.
ಬಿಜೆಪಿ ಈ ಕುರಿತು ಪ್ರತಿಕ್ರಿಯೆ ನೀಡಿ ಬೇಜವಾಬ್ದಾರಿ ಹಾಗೂ ನಾಚಿಕೆಗೇಡಿನ ಕಮೆಂಟ್ಗಳನ್ನು ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ಅವರು ಮತ್ತು ಅವರ ಕುಟುಂಬ ಸದಸ್ಯರು ದೋಷಿಯಾಗಿರುವ ಭ್ರಷ್ಟಾಚಾರ ಪ್ರಕರಣಗಳನ್ನು ಅವರಿಗೆ ಬಿಜೆಪಿ ನೆನಪಿಸಿದೆ.
ಇತ್ತೀಚೆಗೆ ಪಾಟ್ಲಿಪುತ್ರ ಲೋಕಸಭಾ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾರ್ತಿ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ಮೈತ್ರಿ ಅಧಿಕಾರಕ್ಕೆ ಬಂದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ. ಭಾರ್ತಿ ಅವರು ಪಾಟ್ಲಿಪುತ್ರ ಕ್ಷೇತ್ರದಿಂದ ಆರ್‌ಜೆಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಭಾರ್ತಿ ಹೇಳಿಕೆ ಬಗ್ಗೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಆರ್‌ಜೆಡಿ ನಾಯಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅವರು ಮೊದಲು ತಮ್ಮ ಕುಟುಂಬ ಮಾಡಿರುವ ಹಗರಣವನ್ನು ನೋಡಬೇಕು, ಇಂತಹ ಮಾತುಗಳನ್ನು ಹೇಳುವ ಮೂಲಕ ಪ್ರಜಾಪ್ರಭುತ್ವವನ್ನು ಗೇಲಿ ಮಾಡಬಾರದು ಫಡ್ನವಿಸ್ ಹೇಳಿದ್ದಾರೆ.