ಕೊಪ್ಪಳ, ಮೇ 15: ಜಿಲ್ಲೆಯ ಕುಷ್ಟಗಿಯಲ್ಲಿ ಗದಗ-ವಾಡಿ ರೈಲ್ವೆ ಯೋಜನೆಗೆ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಗುರುವಾರ ಹಸಿರು ನಿಶಾನೆ ತೋರಿಸಿದ್ದಾರೆ. ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ರೈಲ್ವೆ ಆರಂಭಿಸಲಾಗಿದೆ. ಆ ಮೂಲಕ ಶತಮಾನಗಳ ಕನಸು ನನಸಾಗಿದೆ. ಕಾರ್ಯಕ್ರಮದಲ್ಲಿ ಸಚಿವ ಶಿವರಾಜ್ ತಂಗಡಗಿ, ಶಾಸಕ ಬಸವರಾಜ್ ರಾಯರೆಡ್ಡಿ ಮತ್ತು ದೊಡ್ಡನಗೌಡ ಪಾಟೀಲ್ ಭಾಗಿಯಾಗಿದ್ದರು.
ಗದಗ-ತಳಕಲ್- ಕುಷ್ಟಗಿ ರೈಲು ಮಾರ್ಗಕ್ಕೆ ಇಂದು ಚಾಲನೆ ನೀಡಲಾಗಿದೆ. ಜೊತೆಗೆ ಕುಷ್ಟಗಿಯಿಂದ ಹುಬ್ಬಳ್ಳಿಗೆ ಪ್ಯಾಸೆಂಜರ್ ರೈಲು ಕೂಡ ಆರಂಭವಾಗಿದೆ. ಈಗಾಗಲೇ ತಳಕಲ್ವರೆಗೂ ಹಳೆಯ ರೈಲು ಮಾರ್ಗ ಇದ್ದು, ಇದೀಗ ತಳಕಲ್ನಿಂದ ಕುಷ್ಟಗಿ ವರೆಗೂ ನೂತನವಾಗಿ ನಿರ್ಮಾಣ ಮಾಡಲಾಗಿದೆ. ಈ ನೂತನ ರೈಲು ಮಾರ್ಗದಿಂದ ಮುಂಬೈ ಕರ್ನಾಟಕ-ಕಲ್ಯಾಣ ಕರ್ನಾಟಕದ ಮಧ್ಯೆ ಸಂಪರ್ಕ ಸುಲಭವಾಗಲಿದೆ.
ರೈಲ್ವೆ ಯೋಜನೆಗೆ ಚಾಲನೆ ಬಳಿಕ ಮಾತನಾಡಿದ ಸಚಿವ ವಿ. ಸೋಮಣ್ಣ, ರೈಲ್ವೆ ಇಲಾಖೆ ಒಂದು ಸೂಕ್ಷ್ಮ ಇಲಾಖೆ. ರಾಯರೆಡ್ಡಿ ಅವರ ಶ್ರಮ ಫಲ ಕೊಟ್ಟಿದೆ. ಫಲ ಕೊಡುವುದಕ್ಕೆ ಕಾರಣ ಪ್ರಧಾನಿ ಮೋದಿ. ರೆಲ್ವೆ ಇಲಾಖೆಯಲ್ಲಿ ನಾವು ಕಾರ್ಯಕ್ರಮ ಮಾಡಲ್ಲ. ಸುಮ್ಮನೆ ಗೊಂದಲ ಆಗತ್ತೆ. ಇಲಾಖೆ ನಿಂತ ನೀರಲ್ಲ, ಹರಿಯೋ ನೀರು. ಯೋಜನೆ ವಿಚಾರವಾಗಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ. ಈ ಯೋಜನೆ ಆರಂಭವಾಗಿದ್ದು, ದೇವೆಗೌಡರು ಪ್ರಧಾನಿಯಾದಾಗ. ರೆಲ್ವೆ ಅಭಿವೃದ್ಧಿಯಾದರೆ, ದೇಶದ ಅಭಿವೃದ್ಧಿ. ವಾಜಪೇಯಿ ಕಾಲದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಆರಂಭವಾಯಿತು. ಮೋದಿ ಅವರ ಕಾಲದಲ್ಲಿ ರೆಲ್ವೆ ಇಲಾಖೆ ದೊಡ್ಡ ಸಾಧನೆ ಮಾಡಿದೆ ಎಂದಿದ್ದಾರೆ