ಬೆಂಗಳೂರು: ಕನ್ನಡಿಗರಿಗೆ ಅವಮಾನ ಮಾಡಿದ ಆರೋಪದ ಅಡಿಯಲ್ಲಿ ಖ್ಯಾತ ಗಾಯಕ ಸೋನು ನಿಗಮ್ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಈ ನಡುವೆ ಅವರ ಬಂಧನದ ಬಗ್ಗೆಯೂ ಚರ್ಚೆ ಶುರುವಾಗಿದೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಬಂಧನದ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವರ ಜೊತೆಗೆ ಚರ್ಚೆ ನಡೆಸುತ್ತೇನೆ ಎಂದರು.
ಕನ್ನಡ ಹಾಡು ಹಾಡಿ ಕರ್ನಾಟಕಕ್ಕೆ ಬಂದು ದುಡ್ಡು ಮಾಡುವಂತವರು ಹಗುರವಾಗಿ ಮಾತನಾಡುವುದನ್ನು ಸಹಿಸಲ್ಲ. ಈಗಾಗಲೇ ಸೋನು ನಿಗಮ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸರ್ಕಾರ ಇವರ ವಿರುದ್ಧ ಕ್ರಮ ವಹಿಸುವ ಕೆಲಸ ಮಾಡುತ್ತಿದೆ ಎಂದರು.
ಕನ್ನಡ ಚಿತ್ರರಂಗ ಅವರನ್ನು ಬ್ಯಾನ್ ಮಾಡಿರುವುದು ಅಭಿನಂದನಾ ಕಾರ್ಯವಾಗಿದೆ. ಯಾವ ನಿರ್ಮಾಪಕರು ಅವರಿಂದ ಹಾಡು ಹಾಡಿಸಬಾರದು. ಯಾವುದೇ ಸಂಗೀತ ಸಂಜೆಗೂ ಅವರನ್ನು ಕರೆಸಬಾರದು. ಯಾರೇ ಇತಂಹ ಕೆಲಸ ಮಾಡಿದ್ರು ಕನ್ನಡಿಗರು ಸಹಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.