ಗೋಕಾಕ: ಹುಕ್ಕೇರಿ ತಾಲೂಕಿನ ಸಾರಾಪೂರ ಗ್ರಾಮದ ಶಾಂತಿನಾಥ ದಿಗಂಬರ್ ಜೈನ್ ಮಂದಿರ ವತಿಯಿಂದ ಸಮುದಾಯ ಭವನ ನಿರ್ಮಿಸಲು 50 ಲಕ್ಷ ರೂ. ಹಾಗೂ ಬಾಗೇವಾಡಿಯ ಆದಿನಾಥ ಭಸ್ತಿ ದೇವಸ್ಥಾನ ಕಮಿಟಿಯಿಂದ ಸಮುದಾಯ ಭವನ ನಿರ್ಮಿಸಲು 40 ಲಕ್ಷ ರೂಪಾಯಿಯನ್ನು ಸರ್ಕಾರದಿಂದ ಮಂಜೂರು ಮಾಡಲಾಗಿದೆ ಎಂದು ಬೆಳಗಾವಿ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.
ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಮಾಧ್ಯದವರೊಂದಿಗೆ ಈ ಕುರಿತು ಮಾತನಾಡಿದ ಅವರು, ಹುಕ್ಕೇರಿ ತಾಲೂಕಿನ ಜೈನ್ ಸಮುದಾಯದ ಮುಖಂಡರು ಹುಕ್ಕೇರಿಯ ಅನೇಕ ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಿಸಲು ಅನುದಾನ ನೀಡಬೇಕೆಂದು ಮನವಿ ಮಾಡಿದ್ದರೂ, ಆದ ಕಾರಣ ಹುಕ್ಕೇರಿ ತಾಲೂಕಿನ ಎರಡು ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಿಸಲು ಅನುದಾನ ಬಿಡುಗಡೆಗೊಳಿಸಲಾಗಿದ್ದು, ಇಂದು ನಾಲ್ಕು ಗಂಟೆಗೆ ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ಅನುದಾನ ಬಿಡುಗಡೆಗೊಳಿಸಿರುವ ಆದೇಶ ಪ್ರತಿಯನ್ನು ಪಡೆಯಬೇಕೆಂದು ತಿಳಿಸಿದರು.
ಇನ್ನು ಹುಕ್ಕೇರಿ ತಾಲೂಕಿನ 23 ಗ್ರಾಮಗಳಿಗೆ ಲೋಕೋಪಯೋಗಿ ಇಲಾಖೆಯಿಂದ 1 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಮಾಸ್ಟ್ ದೀಪ ಅಳವಡಿಸಲು ಆದೇಶಿಸಲಾಗಿದ್ದು, ಸಂಬಂಧಿಸಿದ ಗ್ರಾಮದ ಮುಖಂಡರು ಆದೇಶ ಪ್ರತಿ ಪಡೆಯಲು ಹುಕ್ಕೇರಿ ಪ್ರವಾಸಿ ಮಂದಿರಕ್ಕೆ ಆಗಮಿಸಬೇಕೆಂದು ಸಚಿವರು ತಿಳಿಸಿದ್ದಾರೆ.
ಹೈಮಾಸ್ಟ್ ದೀಪ ಮಂಜೂರಾದ ಗ್ರಾಮಗಳು: – ಹುಕ್ಕೇರಿ ತಾಲೂಕಿನ ಶಿರಪುರ, ಇಟ್ನಿ, ಕರಜಗಾ, ಹಂಜಾನಟ್ಟಿ, ಯಾದಗೂಡ, ಶಿರಹಟ್ಟಿ, ಶಿರಹಟ್ಟಿ ಕೆ.ಡಿ, ಬೆಳವಿ, ಸೈಲಾಪುರ, ಅಮಿನಬಾವಿ, ಕಮತನೂರ, ನಿಡಸೋಸಿ, ಅಂಕಲಿ, ಬೋರ್ಗಲ್ಲ, ಚೆಸ್ತಿ, ಆಲೂರ ಕೆ.ಎಂ, ಅಕ್ಕಿವಾಟ, ಹಂದಿಗೂರ, ನಿಡಸೋಸಿ ವಾಡಿ, ಅಮ್ಮಣಗಿ ಸೇರಿದಂತೆ ಹುಕ್ಕೇರಿ ನಗರಕ್ಕೆ ಮೂರು ಹೈಮಾಸ್ಟ್ ದೀಪ ಮಂಜೂರು ಮಾಡಲಾಗಿದೆ.
ಇದೇ ರೀತಿ ಹುಕ್ಕೇರಿ ತಾಲೂಕಿನ ಎಸ್ಸಿ, ಎಸ್ಟಿ, ಮುಸ್ಲಿಂ ಸಮುದಾಯದವರಿಗೂ ಭರ್ಜರಿ ಗಿಫ್ಟ್ ನೀಡಿದ ಸಚಿವರು, ಹುಕ್ಕೇರಿ ತಾಲೂಕಿನ ಹರಗಾಪುರ, ಹಡಲಗಾ, ಕೆ.ಎಸ್. ನಾಗನೂರು, ಶಿರಪೂರು ಗ್ರಾಮಗಳಲ್ಲಿ ವಾಲ್ಮೀಕಿ ಭವನ ನಿರ್ಮಿಸಲು ತಲಾ 20 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದ್ದು, ಹುಕ್ಕೇರಿ ತಾಲೂಕಿನ 17 ಗ್ರಾಮಗಳಲ್ಲಿ ತಲಾ 20 ಲಕ್ಷ ರೂ. ಅನುದಾನದಂತೆ ಡಾ.ಬಿ.ಆರ್. ಅಂಬೇಡ್ಕರ್ ಭವನ, ಬಾಬು ಜಗಜೀವನ ರಾಮ್ ಭವನ ನಿರ್ಮಿಸಲು ಅನುದಾನ ಬಿಡಗಡೆಗೊಳಿಸಿದ್ದಾಗಿ ಮಾಹಿತಿ ನೀಡಿದರು. ತಾಲೂಕಿನ ವಿವಿಧ ಗ್ರಾಮದ ಅಲ್ಪಸಂಖ್ಯಾತ ಕಾಲೋನಿಗಳಲ್ಲಿಯೂ ಸಿಸಿ ರಸ್ತೆ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆಗೊಳಿಸಿದ್ದಾರೆ.


