ಬೆಳಗಾವಿ,24: ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮದ್ದೇವಾಧಿದೇವ ಶ್ರೀ ಭಗವಾನ 1008 ಆದಿನಾಥ ತೀರ್ಥಂಕರರ ನೂತನ ಜಿನಮಂದಿರದ ಶಿಖರ ಮಾನಸ್ತಂಭೋಪರಿ ಶ್ರೀ ಜಿನಬಿಂಬಗಳ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಲೋಕೋಪಯೋಗಿ ಸಚಿವ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಪ.ಪೂ. ಶ್ರೀ 108 ಬಾಲಾಚಾರ್ಯ ಧರ್ಮಪ್ರಭಾವಕ ಸಿದ್ದಸೇನಾ ಮುನಿ ಅವರ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದರು.
ಈ ವೇಳೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಸರ್ವಧರ್ಮ ಸಮನ್ವಯತೆಯೇ ಶಾಂತಿಯ ಸಂಕೇತವಾಗಿದ್ದು ಇದನ್ನುಪ್ರತಿಯೊಬ್ಬರೂ ಪ್ರತಿಪಾದಿಸಬೇಕು. ಜೀವನ ಮೌಲ್ಯ, ಸಂಸ್ಕಾರದಿಂದಲೇ ಜೈನ್ ಧರ್ಮ ಗೌರವ ಪಡೆದಿದೆಯೇ ಹೊರತು ಸಂಖ್ಯಾ ಬಲದಿಂದ ಅಲ್ಲ ಎಂದ ಅವರು, ದೇಶದಲ್ಲಿ ಜೈನಸಮುದಾಯದವರು ಧಾರ್ಮಿಕ ಆಚರಣೆಯಿಂದಲೇ ಸಮಾಜದಲ್ಲಿ ಎಲ್ಲರ ಪ್ರೀತಿಗೆಪಾತ್ರರಾಗಿದ್ದಾರೆ. ಇದು ಹೀಗೆಯೇ ಮುಂದುವರೆಯಬೇಕು. ಅಹಿಂಸಾವಾದಿಗಳಾಗಿ ಯಾವತ್ತು ಮಾದರಿ ವ್ಯಕ್ತಿಗಳಾಗಿ ನಿರ್ಮಾಣಗೊಳ್ಳಬೇಕು ಎಂದರು.
ಇದೇ ವೇಳೆ ಜೈನ ಸಮುದಾಯದಿಂದ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವೀರಕುಮಾರ ಪಾಟೀಲ್, ಮಾಜಿ ಶಾಸಕರಾದ ಶ್ಯಾಮ್ ಘಾಟಗೆ, ಮೋಹನ್ ಶಾ, ಅಮರೆಗೌಡ ಬಯ್ಯಾಪುರ್, ಕಾಂಗ್ರೆಸ್ ಮುಖಂಡರಾದ ಅಭಿನಂದನ ಪಾಟೀಲ್, ಅಶೋಕ ಮಗದುಮ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.