ರಾಯಬಾಗ,ಏಪ್ರಿಲ್15: ಪಟ್ಟಣಕ್ಕೆ ಕುಡಿಯುವ ಪ್ರಮುಖ ನೀರಿನ ಮೂಲವಾಗಿರುವ ಹುಲ್ಯಾಳ ಕೆರೆಗೆ ಹಿಡಕಲ್ ಡ್ಯಾಂನಿಂದ ಕೆನಾಲ್ ಮೂಲಕ ನೀರು ಹರಿಸಲು ಅಧಿಕಾರಿಗಳಿಗೆ ಆದೇಶಿಸಿ ನೀರು ಬಿಡಿಸಿರುವ ಸಚಿವ ಸತೀಶ ಜಾರಕಿಹೊಳಿ ಪ ಟ್ಟಣದ ಜನತೆ ಪರವಾಗಿ ಅಭಿನಂದಿಸುವುದಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೊಹಿತೆ ಹೇಳಿದರು.
ರವಿವಾರ ಸಾಯಂಕಾಲ ಪಟ್ಟಣದ ಹುಲ್ಯಾಳ ಕೆರೆಗೆ ಕಾಂಗ್ರೇಸ್ ಪಕ್ಷ ಪದಾಧಿಕಾರಿಗಳು ಭೇಟಿ ನೀಡಿ, ಕೆರೆಗೆ ಹರಿದು ಬರುತ್ತಿರುವ ನೀರನ್ನು ವಿಕ್ಷೀಸಿ ಮಾತನಾಡಿದ ಅವರು, ಪಟ್ಟಣದ ಹುಲ್ಯಾಳ ಕೆರೆ ಬರಿದಾಗಿದ್ದರಿಂದ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದರಿಂದ ಇಲ್ಲಿನ ನಾಗರೀಕರು ಮತ್ತು ಕರವೇ ಸಂಘಟನೆಯವರು ನೀರು ಹರಿಸಲು ಮನವಿ ಮಾಡಿಕೊಂಡಿದ್ದರ ಹಿನ್ನಲೆಯಲ್ಲಿ ಇಲ್ಲಿನ ಪರಿಸ್ಥಿತಿ ಮನಗಂಡು ಸಚಿವರು ದುಪದಾಳ ಡ್ಯಾಂ ಹಾಗೂ ಹಿಡಕಲ್ ಡ್ಯಾಂಗಳಲ್ಲಿ ೨೧ ಟಿಎಮ್‌ಸಿ ನೀರಿನ ಸಂಗ್ರಹವಿದ್ದರಿಂದ, ಅಲ್ಲಿಂದ ನೀರು ಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಸಧ್ಯದ ಮಟ್ಟಿಗೆ ಜನಜಾನುವಾರುಗಳಿಗೆ ನೀರು ಲಭ್ಯವಾಗಲಿದ್ದು, ಮತ್ತೆ ಮುಂದಿನ ತಿಂಗಳು ನೀರು ಹರಿಸಲಾಗುವುದು ಎಂದು ತಿಳಿಸಿರುವುದಾಗಿ ಹೇಳಿದರು.
ಮುಖಂಡರಾದ ಶಿವು ಪಾಟೀಲ ಮಾತನಾಡಿ, ಈ ಭಾಗದ ಜನರ, ರೈತರ ಮನವಿಗೆ ಸ್ಪಂದಿಸಿದ ಸಚಿವರು, ಪ್ರಾದೇಶಿಕ ಆಯುಕ್ತರ ಆದೇಶದ ಮೂಲಕ ಜೆಎಲ್‌ಬಿಸಿ ಕಾಲುವೆಗೆ ದುಪದಾಳ ಡ್ಯಾಂ ಮೂಲಕ ಹಾಗೂ ರಾಯಬಾಗ ಕೆರೆಗೆ ಹಿಡಕಲ್ ಡ್ಯಾಂ ಮೂಲಕ ಜನಜಾನುವಾರುಗಳಿಗೆ ಕುಡಿಯಲ ನೀರು ಹರಿಸಲು
ಕ್ರಮಕೈಗೊಂಡಿದ್ದಾರೆ. ಈಗ ಕೆರೆಗೆ ದಿನನಿತ್ಯ ೧೦೦ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಎ.೧೦ ರಿಂದ ೨೦ ರವರೆಗೆ ಹತ್ತು ದಿನಗಳ ವರೆಗೆ ನೀರು ಹರಿಸಲು ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಭಾಗದ ಜನರ ಮತ್ತು ರೈತರ ಪರವಾಗಿ ಅಧಿಕಾರಿಗಳಿಗೆ ಮತ್ತು ಸಚಿವರಿಗೆ ಅಭಿನಂದಿಸುವುದಾಗಿ ತಿಳಿಸಿದರು.
ರಾಯಬಾಗ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಿದ್ದು ಬಂಡಗರ, ಕಾಂಗ್ರೇಸ್ ಮುಖಂಡರಾದ ಸದಾಶಿವ ದೇಶಿಂಗೆ, ಅಬ್ದುಲ್‌ಸತ್ತಾರ ಮುಲ್ಲಾ, ದಿಲೀಪ ಜಮಾದಾರ, ನಾಮದೇವ ಕಾಂಬಳೆ, ಹಾಜಿ ಮುಲ್ಲಾ, ತಮ್ಮಾಣಿ ನಿಂಗನೂರೆ, ಜ್ಯೋತಿ ಕೆಂಪಟ್ಟಿ, ಸಂತೋಷ ಶೇಲಾರ, ಯುನುಸ ಅತ್ತಾರ, ಮುಜಿಬರ ಸಯ್ಯದ, ಅದಂ ಪಠಾಣ, ಪ್ರಶಾಂತ ಕಾಂಬಳೆ ಸೇರಿದಂತೆ ಅನೇಕರು ಇದ್ದರು.