ಜಿಲ್ಲಾಧಿಕಾರಿ ರೋಷನ್‌ ಪರ ಕಾನೂನು ಹೋರಾಟ: ಸಚಿವ ಸತೀಶ್‌ ಜಾರಕಿಹೊಳಿ

Hasiru Kranti
ಜಿಲ್ಲಾಧಿಕಾರಿ ರೋಷನ್‌ ಪರ ಕಾನೂನು ಹೋರಾಟ: ಸಚಿವ ಸತೀಶ್‌ ಜಾರಕಿಹೊಳಿ
WhatsApp Group Join Now
Telegram Group Join Now

ಡಿಸಿ ಪರ ರಾಜ್ಯದ ಎಲ್ಲಾ ಸಂಸದರು ಧ್ವನಿ ಎತ್ತಲಿ- ಮೊಹಮ್ಮದ್‌ ರೋಷನ್‌ ನಡೆ ಕಾನೂನು ಬದ್ಧವಿದೆ

ಬೆಳಗಾವಿ: ಮಹಾರಾಷ್ಟ್ರದ ಸಂಸದ ಧೈರ್ಯಶೀಲ ಮಾನೆ ಅವರು ಜಿಲ್ಲಾಧಿಕಾರಿ ವಿರುದ್ಧ ‘ಹಕ್ಕುಚ್ಯುತಿ’ ಆರೋಪ ಮಾಡಿ ಲೋಕಸಭೆ ಸ್ಪೀಕರ್‌ಗೆ ದೂರು ನೀಡಿದ್ದರ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ. ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಅವರ ನಡೆ ಕಾನೂನು ಬದ್ಧವಾಗಿದೆ. ಡಿಸಿಯವರು ಹಕ್ಕುಚ್ಯುತಿ ಮಾಡಿಲ್ಲವೆಂಬುವುದು ನಮ್ಮ ವಾದವಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಅವರ ವಿರುದ್ಧ ‘ಹಕ್ಕುಚ್ಯುತಿ’ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ ಅಷ್ಟೇ, ಆದರೆ ಇನ್ನುವರೆಗೆ ಯಾವುದೇ ನೋಟಿಸ್‌ ಬಂದಿಲ್ಲ. ಕಮಿಟಿ ರಚಿಸಿಲ್ಲ. ನೋಟಿಸ್‌ ಬಂದ ಮೇಲೆ ನಾವು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ಈ ವಿಷಯದಲ್ಲಿ ರಾಜ್ಯದ ಎಲ್ಲಾ ಸಂಸದರು ಈ ಬಗ್ಗೆ ಧ್ವನಿ ಎತ್ತಬೇಕೆಂದು ತಿಳಿಸಿದರು.
ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿಯಬೇಡಿ: ಬೆಳಗಾವಿಯಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸದಿರುವುದಕ್ಕೆ ಸಂಬಂಧಿಸಿದಂತೆ ಮಾಧ್ಯಮವದರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಪೋಕ್ಸೋ ಪ್ರಕರಣದಲ್ಲಿ ಪೊಲೀಸರು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬಾರದು, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೋಕ್ಸೋ ಕೇಸ್‌ ದಾಖಲಿಸಲೇಬೇಕು. ಈ ಕುರಿತು ನಾನು ಪತ್ರಿಕೆಯಲ್ಲಿ ನೋಡಿದ್ದೇನೆ. ಈ ಕುರಿತು ಬೆಳಗಾವಿ ಪೊಲೀಸ್‌ ಆಯುಕ್ತರ ಬಳಿ ವಿವರಣೆ ಕೇಳಿ ಕ್ರಮಕ್ಕೆ ಸೂಚನೆ ನೀಡುತ್ತೇನೆಂದರು.
ಬೆಳಗಾವಿ ವಿಭಜನೆ ಬಗ್ಗೆ ಬೆಂಗಳೂರಿನಲ್ಲಿ ಚರ್ಚೆ: ಶೀಘ್ರದಲ್ಲೇ ಬೆಳಗಾವಿ ಜಿಲ್ಲಾ ವಿಭಜನೆ ಮಾಡಲಾಗುವುದು ಎಂದು ಕಾನೂನು ಸಚಿವ ಎಚ್.ಕೆ, ಪಾಟೀಲ್‌ ಚಿಕ್ಕೋಡಿಯಲ್ಲಿ ಹೇಳಿಕೆ ನೀಡಿದ್ದರ ಕುರಿತು ಮಾತನಾಡಿದ ಅವರು, ಬೆಳಗಾವಿ ಜಿಲ್ಲಾ ವಿಭಜನೆ ಕುರಿತು ಬೆಂಗಳೂರಿನಲ್ಲಿ ಚರ್ಚೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಬೆಳಗಾವಿ ಜಿಲ್ಲಾ ವಿಭಜನೆ ಬಗ್ಗೆ ಸಿಎಂ ಅವರೇ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿ-48 ರಿಂದ 3ನೇ ಗೇಟ್‌ ವರೆಗೆ ಯೋಜನೆ ವಿಸ್ತರಿಸಲು ನಿರ್ಧಾರ: ಬೆಳಗಾವಿಯಲ್ಲಿ ಬಹುನಿರೀಕ್ಷಿತ ಫ್ಲೈಓವರ್ ನಿರ್ಮಾಣಕ್ಕೆ ಈಗಾಗಲೇ ರಾಜ್ಯ ಸಚಿವ ಸಂಪುಟ ಯೋಜನೆಗೆ ಅನುಮೋದನೆ ನೀಡಿದ್ದು, ಇದು ರಾಷ್ಟ್ರೀಯ ಹೆದ್ದಾರಿ-48 ರಿಂದ ಧರ್ಮವೀರ ಸಂಭಾಜಿ ವೃತ್ತದವರೆಗೆ ಸರಿಸುಮಾರು 2.03 ಕಿ.ಮೀ ಉದ್ದವಿರಲಿದೆ. ಈ ಯೋಜನೆಗೆ ಎಲ್ಲಿಯೂ ಭೂಸ್ವಾಧಿನ ಮಾಡುವ ಅವಶ್ಯಕತೆ ಇಲ್ಲಾ, ಈ ಯೋಜನೆಯನ್ನು ಬೆಳಗಾವಿ ಮೂರನೇ ಗೇಟ್‌ ವರೆಗೆ ವಿಸ್ತರಣೆ ಮಾಡಬೇಕೆಂದು ನಿರ್ಧರಿಸಿದ್ದೇವೆ ಎಂದರು. ಈ ಯೋಜನೆಯಿಂದ ನಗರದ ಸಂಚಾರ ದಟ್ಟಣೆ ಕಡಿಮೆಯಾಗುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
WhatsApp Group Join Now
Telegram Group Join Now
Share This Article