ಬೆಳಗಾವಿ: ಕುಡಿಯುವ ನೀರಿನ ಸಮಸ್ಯೆ ಹೋಗಲಾಡಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಸಾರ್ವಜನಿಕರು 24/7 ನಿರಂತರ ನೀರು ಸರಬರಾಜು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿ ಉತ್ತರ ಮತಕ್ಷೇತ್ರದ ವಾರ್ಡ್ ಸಂಖ್ಯೆ 47, 55ರಲ್ಲಿರುವ ಮನೆಗಳಿಗೆ 24/7 ನಿರಂತರ ನೀರು ಸರಬರಾಜು ಯೋಜನೆಯ ಪ್ರಾಯೋಗಿಕವಾಗಿ ಚಾಲನೆ ನೀಡಿ ಮಾತನಾಡಿದ ಅವರು, ಪಿರೋಜ ಸೇಠ್ ಶಾಸಕರಾಗಿದ್ದಾಗ ಈ ಯೋಜನೆ ಜಾರಿಗೆ ಪ್ರಯತ್ನ ಪಟ್ಟಿದ್ದರು. ಬಿಜೆಪಿ ಸರ್ಕಾರದಲ್ಲಿ ಯೋಜನೆಗೆ ಮಂಜೂರಾತಿ ದೊರತಿದೆ. ಬೆಳಗಾವಿ ವೇಗವಾಗಿ ಬೆಳೆಯುತ್ತಿದೆ. ನಾವು ಅಧಿಕಾರಕ್ಕೆ ಬಂದಾಗನಿಂದಲೂ ಬೆಳಗಾವಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ ಎಂದರು.
ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಈ ಹಿಂದೆ ಎರಡ್ಮೂರು ದಿನಕ್ಕೊಮ್ಮೆ ನೀರು ಬರುತ್ತಿತ್ತು. ನೀರು ಸಂಗ್ರಹಿಸಿಟ್ಟು ಮತ್ತೆ ಹೊಸ ನೀರು ಬಂದಾಗ ಅದನ್ನು ಚೆಲ್ಲಿ ಮತ್ತೆ ನೀರು ಸಂಗ್ರಹಿಸಲಾಗುತ್ತಿತ್ತು. 24/7 ನೀರು ಸರಬರಾಜು ಆಗುತ್ತಿರುವುದ್ದರಿಂದ ನೀರು ಪೋಲಾಗುವುದಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಬೆಳಗಾವಿ ಜಿಲ್ಲೆ ಬೆಂಗಳೂರು ಹೊರೆತು ಪಡಿಸಿ ಅತೀ ಹೆಚ್ಚು ಶಾಸಕರನ್ನು ಹೊಂದಿರುವ ಜಿಲ್ಲೆಯಾಗಿದೆ. ಬೆಳಗಾವಿ ಮಹಾನಗರ ಅತೀ ವೇಗವಾಗಿ ಬೆಳೆಯುತ್ತಿದೆ. ಬೆಳೆಯುತ್ತಿರುವ ನಗರದಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ. ಇತಿ ಮೀತಿಯೋಳಗೆ ನೀರಿನ ಸದ್ಬಳಕೆ ಮಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಆಸೀಪ್ ಸೇಠ್, ರಕ್ಕಸಕೊಪ್ಪದಿಂದ ಮಾತ್ರ ಬೆಳಗಾವಿಗೆ ನೀರು ಪೂರೈಕೆಯಾಗುತ್ತಿತ್ತು. 2015ರಲ್ಲಿ ಸತೀಶ ಜಾರಕಿಹೊಳಿ ಸಚಿವರಾಗಿದ್ದರು, ಪಿರೋಜ್ ಸೇಠ್ ಶಾಸಕರಾಗಿದ್ದ ಸಮಯದಲ್ಲಿ ಹಿಡಕಲ್ ಜಲಾಶಯದಿಂದ ಕುಡಿಯುವ ನೀರು ಪೂರೈಕೆಯ ಯೋಜನೆಯ ನೀಲನಕ್ಷೆ ತಯಾರಿಸಿದ್ದರು. ಹಿಡಕಲ್ ಜಲಾಶಯದಿಂದ ಪ್ರತಿದಿನ 60 ಕೋಟಿ ಲೀಟರ್ ಶುದ್ದೀಕರಿಸಿದ ನೀರು ಬೆಳಗಾವಿಗೆ ಬರುತ್ತಿದೆ. ಚಿಕ್ಕದಾದ ಕಣಬರಗಿ ರಸ್ತೆ ಅಗಲೀಕರಣ, ಕಣಬರಗಿ ಕರೆಯನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಗೊಳಿಸಲಾಗಿದೆ ಎಂದರು.
ಸಚಿವ ಸತೀಶ ಜಾರಕಿಹೊಳಿ, ಸಂಸದ ಜಗದೀಶ ಶೆಟ್ಟರ್ ಸೇರಿದಂತೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಗಣ್ಯರನ್ನು ಕಣಬರಗಿ ನಾಗರೀಕರ ಪರವಾಗಿ ಸನ್ಮಾನಿಸಲಾಯಿತು. ಮ
ಈ ಸಂದರ್ಭದಲ್ಲಿ ಪಾಲಿಕೆ ಮೇಯರ ಮಂಗೇಶ ಪವಾರ, ಉಪಮೇಯರ ವಾಣಿ ಜೋಶಿ, ನಗರ ಸೇವಕಿಯರಾದ ಅಸ್ಮಿಥಾ ಪಾಟೀಲ, ಸವಿತಾ ಪಾಟೀಲ, ಸೇವಕರಾದ ಭೈರಗೌಡಾ ಪಾಟೀಲ, ಮುರಘೇಂದ್ರ ಪಾಟೀಲ ಸೇರಿದಂತೆ ಎಲ್ ಆ್ಯಂಡ್ ಟಿ ಕಂಪನಿಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.