ಸಂಕೇಶ್ವರ,ಬೆಳಗಾವಿ, ಏ.10: ಕರ್ನಾಟದಲ್ಲಿ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಹವಾ ಮಾತ್ರವಿದೆ-ಪ್ರಿಯಂಕಾ ಜಾರಕಿಹೊಳಿಗೆ ರಾಜಕೀಯವಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸ. ದೇಶದಲ್ಲಿ ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ವೈಪಲ್ಯಗಳನ್ನು ಕಾರ್ಯಕರ್ತರು ಜನರಿಗೆ ತಿಳಿಸಬೇಕೆಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನೇಸರಿ ಗಾರ್ಡನ್ ದಲ್ಲಿ ಹಮ್ಮಿಕೊಂಡಿದ್ದ ಹುಕ್ಕೇರಿ ವಿಧಾನಸಭೆ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಅಧಿಕಾರಕ್ಕೇರಲು ಜನತೆಗೆ ಸಾಕಷ್ಟು ಭರವಸೆಗಳನ್ನು ನೀಡಿದರು. ಆದರೆ ಇದುವರೆಗೆ ಒಂದೇ ಒಂದು ಭರವಸೆ ಈಡೇರಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ರೈತರ ಆದಾಯ ದ್ವಿಗುಣ ಆಗಲಿಲ್ಲ. ಎರಡು ಕೋಟಿ ಯುವಕರಿಗೆ ಉದ್ಯೋಗ ದೊರೆಯಲ್ಲಿ. ಕಪ್ಪು ಹಣ ವಾಪಸ್ಸ್ ಬರಲಿಲ್ಲ. ಇಂತಹ ಅನೇಕ ಭರವಸೆಗಳನ್ನು ನೀಡಿದ ಕೇಂದ್ರ ಬಿಜೆಪಿ ಸರ್ಕಾರದ ಎಲ್ಲಾ ವೈಫಲ್ಯಗಳನ್ನು ಕಾರ್ಯಕರ್ತರು ಜನತೆಗೆ ತಿಳಿಸಬೇಕೆಂದ ಅವರು, ರಾಜ್ಯದಲ್ಲಿ ಮೋದಿ ಹವಾ ಇದೆ ಎನ್ನುತ್ತಿದ್ದಾರೆ. ಕರ್ನಾಟಕದಲ್ಲಿ ಏನಿದ್ದರೂ ಸಿದ್ದರಾಮಯ್ಯನವರ ಹವಾ, ಕಾಂಗ್ರೆಸ್ ಪಕ್ಷದ ಹವಾ ಇದೆ. ಮೋದಿ ಹವಾ ಎಲ್ಲಿಯೂ ನಮಗೆ ಕಾಣುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಇನ್ನು ಹಾಲಿ ಸಂಸದ ಅಣ್ಣಾಸಾಬೇಬ್ ಜೊಲ್ಲೆ ಅವರ ವೈಪಲ್ಯಗಳನ್ನು ಜನತೆಗೆ ತಿಳಿಸಿ. ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲುವ ವಾತಾವರಣ ಇದೆ. ಜೊಲ್ಲೆ ವಿರುದ್ದ ಇಲ್ಲಿನ ಜನರಿಗೆ ಅಸಮಾಧನವಿದೆ. ಅದಕ್ಕಾಗಿ ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಗೆಲುವಿಗೆ ಹೆಚ್ಚಿನ ಮುತುರ್ವಜಿ ವಹಿಸಬೇಕೆಂದು ಸಲಹೆ ನೀಡಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಕಳೆದ ನಾಲ್ಕೈದು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕವಾಗಿ ಸೇವೆ ಸಲ್ಲಿಸುತ್ತಿದ್ದು, ಚಿಕ್ಕೋಡಿ ಲೋಕಸಭೆ ಮತದಾರರು, ಮುಖಂಡರು ಪ್ರಿಯಂಕಾ ಅವರನ್ನು ಆಶೀರ್ವದಿಸಿ, ಲೋಕಸಭೆಗೆ ಕಳುಹಿಸುವ ಮೂಲಕ ಪ್ರಿಯಂಕಾ ಅವರಿಗೆ ರಾಜಕೀಯವಾಗಿ ಸೇವೆ ಸಲ್ಲಿಸಲು ಅನುವು ಮಾಡಿಕೊಡಬೇಕೆಂದು ಕೋರಿದರು.
ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ಮಾತನಾಡಿ, ನಿಮ್ಮೆಲ್ಲರ ಪ್ರೀತಿ, ಆರ್ಶೀವಾದದಿಂದ ನನಗೆ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಕ್ಕಿದೆ. ನಾನು ಎಂಬಿಎ ಪದವಿ ಪಡೆದಿದ್ದು, ಕೆಳದ ನಾಲ್ಕೈದು ವರ್ಷಗಳಿಂದ ಸಾರ್ವಜನಿಕವಾಗಿ ಅನೇಕ ಕೆಲಸಗಳಲ್ಲಿ ತೊಡಗಿದ್ದೇನೆ. ಸತೀಶ್ ಜಾರಕಿಹೊಳಿ ಫೌಂಡೇಶನ್ ಮೂಲಕ ಯುವಕರಿಗೆ ಆರ್ಮಿ, ಪೊಲೀಸ್, ಕೆಎಎಸ್, ಐಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಳನ್ನು ಉಚಿತವಾಗಿ ನೀಡುತ್ತಿದ್ದೇವೆ. ಕೆಳದ ಬಾರಿ ಬೆಳಗಾವಿ ಜಿಲ್ಲೆಯ 58 ಸಾವಿರ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ “ನಮ್ಮ ಪಯಣ ಗೆಲುವಿನತ್ತ” ಪುಸ್ತಕಗಳನ್ನು ವಿತರಿಸಿದ್ದೇವೆಂದು ತಿಳಿಸಿದರು.
ಇನ್ನು ತಂದೆ, ಸಚಿವರಾದ ಸತೀಶ್ ಜಾರಕಿಹೊಳಿ ಅವರ ಕಾರ್ಯಕ್ಷಮತೆ ಬಗ್ಗೆ ನಿಮಗೆಲ್ಲ ಗೊತ್ತು. ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ತಂದೆಯವರು ಶ್ರಮಿಸುತ್ತಿದ್ದಾರೆ. ಲೋಕೋಪಯೋಗಿ ಇಲಾಖೆ ಸಚಿವರಾದ ಬಳಿಕ ಜಿಲ್ಲೆಗೆ ಸಾಕಷ್ಟು ಯೋಜನೆಗಳನ್ನು ತಂದಿದ್ದು, ರಾಜ್ಯದಲ್ಲಿ ಅನೇಕ ಹೆದ್ದಾರಿಗಳನ್ನು ನಿರ್ಮಿಸುತ್ತಿದ್ದಾರೆ. ಕೆಲ ಹೆದ್ದಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಅವರು, ಕಾರಣ ಚಿಕ್ಕೋಡಿ ಕ್ಷೇತ್ರದಿಂದ ಹೆಚ್ಚಿನ ಮತಗಳನ್ನು ನೀಡಿ ನನ್ನನ್ನು ಲೋಕಸಭೆಗೆ ಕಳುಹಿಸಿದರೆ ತಂದೆಯವರ ಸಲಹೆ, ಸೂಚನೆ ಮೇರೆಗೆ ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸುವ ಮೂಲಕ ನಿಮ್ಮ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತೇನೆಂದು ಭರವಸೆ ನೀಡಿದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಜವಾಲಾಲ್ ನೆಹರು ಅವರಿಂದ ಹಿಡಿದು ಡಾ. ಮನ್ ಮೋಹನ್ ಸಿಂಗ್ ಅವರ ಆಡಳಿತಾದವಧಿಯಲ್ಲಿ ಸಾಕಷ್ಟು ಡ್ಯಾಮ್ ಗಳನ್ನು ನಿರ್ಮಿಸುವ ಮೂಲಕ ನೀರಾವರಿ ಯೋಜನೆಗಳನ್ನು ಮಾಡಲಾಗದೆ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡಿದ್ದಾರೆ. ಡಾ. ಮನ್ ಮೋಹನ್ ಸಿಂಗ್ ಅವಧಿಯಲ್ಲಿ ದೇಶದ ಆರ್ಥಿಕತೆ ಪ್ರಗತಿಯತ್ತ ಸಾಗಿತ್ತು. ಹೀಗೆ ಅನೇಕ ಜನಪರ ಯೋಜನೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ಪಕ್ಷ ದೇಶದ ಏಳಿಗೆಗೆ ಅಪಾರ ಕೊಡುಗೆ ನೀಡಿದೆ ಎಂದು ಹೇಳಿದರು.
ಮಾಜಿ ಸಚಿವ ಎ.ಬಿ. ಪಾಟೀಲ್ ಮಾತನಾಡಿ, ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಪ್ರಿಯಂಕಾ ಜಾರಕಿಹೊಳಿ ಆಯ್ಕೆಯಾಗುವುದು ನಿಶ್ಚಿತ. ಆದರೆ ಬಹು ಅಂತರದಿಂದ ಗೆಲ್ಲಿಸಬೇಕೆಂದು ನಾವೆಲ್ಲರೂ ಪಣ ತೊಡೋಣ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಿಂದ ದೇಶದ ಜನ ಬೇಸತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನ ಸಾಮಾನ್ಯರು ಕಷ್ಟಕ್ಕೆ ಸಿಲುಕಿದ್ದಾರೆ. ಮೋದಿಯವರು ಯುವಕರಿಗೆ ಉದ್ಯೋಗ ನೀಡುವ ಭರವಸೆ ಹುಸಿಯಾಗಿದೆ. ಅದಕ್ಕಾಗಿ ಸರ್ವರ ಕಾಳಜಿ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಮಾಜಿ ಸಚಿವ ಶಶಿಕಾಂತ್ ನಾಯಕ ಮಾತನಾಡಿ, ಚಿಕ್ಕೋಡಿ ಲೋಕಸಭೆ ಕ್ಷೇತ್ರವನ್ನು ನಾವು ಈ ಬಾರಿ ಗೆದ್ದೆ ಗೆಲ್ಲುತ್ತೇವೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಎಷ್ಟು ಮತಗಳ ಅಂತರದಿಂದ ಪ್ರಿಯಂಕಾ ಜಾರಕಿಹೊಳಿ ಅವರನ್ನು ಗೆಲ್ಲಿಸುತ್ತೇವೆಂಬುವುದು ಪ್ರಮುಖವಾಗಿದ್ದು, ಪಕ್ಷದ ಅಭ್ಯರ್ಥಿ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು. ಇನ್ನು ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಇದಕ್ಕೆ ಗ್ಯಾರಂಟಿ ಯೋಜನೆಗಳ ಜಾರಿಯೇ ಸಾಕ್ಷಿ ಎಂದರು.
ಇದೇ ವೇಳೆ ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನೇಮಕ ಪತ್ರದ ಆದೇಶ ಪ್ರತಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ವೀರಕುಮಾರ ಪಾಟೀಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುನೀಲ್ ಹಣಮನ್ನವರ್, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಬೆಳಗಾವಿ ಬೂಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಪುರಸಭೆ ಸದಸ್ಯ ವಿಜಯ ರವದಿ, ಯುವ ನಾಯಕ ರಾಹುಲ್ ಜಾರಕಿಹೊಳಿ, ಕಾಂಗ್ರಸ್ ಪಕ್ಷದ ಮುಖಂಡರಾದ ಬಸವರಾಜ ಕೋಳಿ, ಸುರೇಶ್ ಹುಂಚಾಳೆ, ವಿನೋದ ನಾಯಕ್, ವಿನಯ ಪಾಟೀಲ್, ಚಿದಾನಂದ ತಳವಾರ, ಸಂತೋಷ ಗುಡಸಿ,
ಎಂ.ಎಸ್. ಹಂಜಿ, ದಿಲೀಪ್ ಹೊಸಮನಿ, ಶ್ಯಾನುರ್ ತಹಶೀಲ್ದಾರ್, ಕಾಡಪ್ಪ ಕಟ್ಟಿ, ಮೌನೇಶ ಪೊದ್ದಾರ್, ಪ್ರಶಾಂತ ಕೋಳಿ, ಸೀತಲ್ ಮಠಪತಿ, ದಿನೇಶ್ ಜಾದವ್, ಮಹಿಳಾ ಮುಖಂಡರಾದ ಸುನೀತಾ ಗಸ್ತಿ, ಜಯಶ್ರೀ ಮಾಳಗಿ, ಲತಾ ಮಾಳಗಿ ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು, ಯುವಕರು, ಮಹಿಳೆಯರು ಉಪಸ್ಥಿತರಿದ್ದರು.