ಕಳೆದ 26 ವರ್ಷಗಳಲ್ಲಿ ನಮ್ಮನ್ನು ಯಾರು ಪ್ರಶ್ನಿಸಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ

Ravi Talawar
ಕಳೆದ 26 ವರ್ಷಗಳಲ್ಲಿ ನಮ್ಮನ್ನು ಯಾರು ಪ್ರಶ್ನಿಸಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ
WhatsApp Group Join Now
Telegram Group Join Now
ಬೆಳಗಾವಿ: ಕಳೆದ 26 ವರ್ಷಗಳಿಂದ ನಮ್ಮನ್ನು ನೀವು ಯಾಕೆ ಮತಕ್ಷೇತ್ರಕ್ಕೆ ಬಂದಿಲ್ಲ, ಭೇಟಿಯಾಗಿಲ್ಲವೆಂದು ಯಾರು ಕೂಡ ಪ್ರಶ್ನಿಸಿಲ್ಲ. ಏಕೆಂದರೆ ಬೆಳಗ್ಗೆಯಿಂದ ಸಂಜೆವರೆಗೆ ನಾವು ಜನರೊಂದಿಗೆ ಸಮಯ ಕಳೆಯುತ್ತೇವೆ, ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.
ನಗರದ ಕಾಂಗ್ರೆಸ್‌ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ರಿ ಪ್ರಿಯಂಕಾ ಜಾರಕಿಹೊಳಿ ಚಿಕ್ಕೋಡಿ ಸಂಸದರಾಗಿ ಆಯ್ಕೆಯಾದ ಬಳಿಕ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಜನತೆಗೆ ಭೇಟಿಯಾಗುತ್ತಿದ್ದೇವೆ. ಅಲ್ಲಿನ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಳ್ಳುತ್ತಿದ್ದೇವೆ. ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಮಾಡಲು ಸಾಕಷ್ಟು ಕೆಲಸಗಳಿವೆ. ಅವುಗಳನ್ನು ಹಂತ, ಹಂತವಾಗಿ ಮಾಡಲಾಗುವುದು ಎಂದು ತಿಳಿಸಿದರು.
ರಾಯಬಾಗ, ಕುಡಚಿ ಮತಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿದ್ದು, ಚಿಕ್ಕೋಡಿ, ನಿಪ್ಪಾಣಿ, ಅಥಣಿ, ಕಾಗವಾಡ  ಕ್ಷೇತ್ರದ ಸಮಸ್ಯೆಗಳಿಗೂ ಗಮನ ಹರಿಸಬೇಕಾಗಿದೆ. ಚಿಕ್ಕೋಡಿ ಲೋಕಸಭೆ ಕ್ಷೇತ್ರ ನಮಗೆನೂ ಹೊಸದಲ್ಲ. ಆದರೆ ಜನರ ಸಮಸ್ಯೆಗಳನ್ನು ಖುದ್ದಾಗಿ ತಿಳಿದುಕೊಳ್ಳಲು ಪ್ರವಾಸ ಮಾಡುತ್ತಿದ್ದೇವೆ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ನಿಭಾಯಿಸುತ್ತಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಚುನಾವಣೆ ಸಮೀಪ ಬಂದಾಗ ನೋಡೋಣ. ಬಹಳಷ್ಟು ಜನ ಕೆಪಿಸಿಸಿ ಅಧ್ಯಕ್ಷರಾಗಲು ಸಮರ್ಥರಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಬೇಕೆಂದು ಬಹಳಷ್ಟು ಜನ ಆಕಾಂಕ್ಷಿಗಳು ಇದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡುವುದು ಬಿಡುವುದು ಹೈಕಮಾಂಡ್‌ ಗೆ ಬಿಟ್ಟ ವಿಚಾರ. ಈ ಬಗ್ಗೆ ಹೈಕಮಾಂಡ್ ನಿರ್ಧಾರವೇ ಅಂತಿಮ ನಿರ್ಧಾರ. ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ನಡೆದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಕಳೆದ ವಾರ ದೆಹಲಿಗೆ ಹೋಗಿ ಕೆಪಿಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದು ನಿಜ.  ಅಧ್ಯಕ್ಷರ ಭೇಟಿ ಮಾಡುವುದು ಸಹಜ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಇನ್ನು ಅಧ್ಯಕ್ಷರ ಭೇಟಿ ನಂತರ ಕೇಂದ್ರ ಸಚಿವ ನಿತಿನ್‌ ಗಟ್ಕರಿ ಸೇರಿದಂತೆ ಅನೇಕರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಿದ್ದಾಗಿ ಇದೇ ವೇಳೆ ಮಾಹಿತಿ ನೀಡಿದರು.
ಸಿಎಂ ಆಗಬೇಕೆಂದರೆ ಸಮಯ ಕೂಡಿ ಬರಬೇಕು. ಸಮಯ ಕೂಡಿ ಬರಬೇಕಾದರೆ ಕಾಯಬೇಕು. ರಾಜಕೀಯದಲ್ಲಿ ತಾಳ್ಮೆ ಇದ್ದರೆ ಮಾತ್ರ ಬೆಳೆಯಲು ಸಾಧ್ಯವಿದೆ. ಯಾವುದೇ ಆಯ್ಕೆ ಇರಲಿ, ಇಲ್ಲದಿರಲಿ ಪಕ್ಷದಲ್ಲಿ ಚರ್ಚೆಯಾದಾಗ ಮಾತ್ರ ರಾಜಕೀಯವಾಗಿ ಬೆಳವಣಿಗೆಗಳು ಆಗುತ್ತವೆ. ಇನ್ನು ಯಾವುದೇ ಸಮಾಜದ ಸ್ವಾಮೀಜಿಗಳಾಗಲಿ ಅವರವರ ಸಮಾಜದ ಬಗ್ಗೆ,  ರಾಜಕೀಯವಾಗಿ ಮಾತನಾಡುವುದು ತಪ್ಪಲ್ಲ ಎಂದ ಸಚಿವರು, ನಾವೇ ಡಿಸಿಎಂ ಆಗಬೇಕೆಂದು ಎಲ್ಲಿಯೂ ಹೇಳಿಲ್ಲ. ಬೇರೆಯವರು ಮಾತನಾಡಿದರೆ ನಾವೆನೂ ಮಾಡಲಿಕ್ಕೆ ಆಗಲ್ಲವೆಂದರು.
ಬೆಳಗಾವಿ ಜಿಲ್ಲೆ ದೊಡ್ಡ ಜಿಲ್ಲೆಯಾಗಿದ್ದು ಹೆಚ್ಚಿನ ಸ್ಥಾನ ನಿಗಮ ಮಂಡಳಿಗಳಲ್ಲಿ ಜಿಲ್ಲೆಗೆ ಸಿಗಬೇಕೆಂದು ನನ್ನ ಆಗ್ರಹವೂ ಇದೆ. ಈ ಕುರಿತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದ ಅವರು, ಕಣಬರ್ಗಿ ಲೇಔಟ್ ಅಭಿವೃದ್ಧಿಗಾಗಿ ಕ್ಯಾಬಿನೆಟ್‌ ನಲ್ಲಿ ಅನುಮೋದನೆ ನೀಡಿದ್ದು, ಟೆಂಡರ್‌ ಕರೆದು  ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು. ಇನ್ನು ಬೆಳಗಾವಿ ನಗರದ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅವಶ್ಯವಿರುವ ಸಿಬ್ಬಂದಿಗಳ ನೇಮಕ ಹಾಗೂ ವೈದ್ಯಕೀಯ ಉಪಕರಣಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಈಚೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರೊಂದಿಗೆ ಚರ್ಚಿಸಿದ್ದು, ಶೀಘ್ರದಲ್ಲಿಯೇ ಆಸ್ಪತ್ರೆ ಆರಂಭಿಸಲಾಗುವುದು ಎಂದರು.
ಆಂತರಿಕ ಸಮೀಕ್ಷೆ ಮಾಡುತ್ತಿರುವುದು ನಿಜ:
ಬೆಳಗಾವಿ, ಚಿಕ್ಕೋಡಿ ಲೋಕಸಭೆ ಚುನಾವಣೆಯಲ್ಲಿ ಸೋಲು, ಗೆಲುವು ಬಗ್ಗೆ ಆಂತರಿಕ ಸಮೀಕ್ಷೆ ಮಾಡುತ್ತಿರುವುದು ನಿಜ. ಈ ಸಮೀಕ್ಷೆ  ನಡೆಸಲು ಟೀಮ್‌ ರಚಿಸಲಾಗಿದ್ದು, ಈಗಾಗಲೇ  ಪ್ರತಿ ಬೂತ್ ಮಟ್ಟದಲ್ಲಿ  ಸಮೀಕ್ಷೆ ನಡೆಯುತ್ತಿದೆ. ಮುಂದಿನ ಬಾರಿ 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇವೆಂದು ಈಗಾಗಲೇ ಘೋಷಿಸಿದ್ದು, ಅದಕ್ಕಾಗಿ ಎಲ್ಲಿ ನಮಗೆ ಕಡಿಮೆ ಮತಗಳು ಬಂದಿವೆ, ನಮ್ಮಿಂದ ಎನು ತಪ್ಪಾಗಿದೆ ಎಂಬ ಎಲ್ಲಾ ಅಂಶಗಳನ್ನು ತಿಳಿಯಲಿಕ್ಕೆ ಸಮೀಕ್ಷೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಶಾಸಕರಾದ ರಾಜು ಕಾಗೆ, ಲಕ್ಷ್ಮಣ ಸವದಿ, ಮಹೇಂದ್ರ ತಮ್ಮಣ್ಣವರ್ ಅಥಣಿಯಲ್ಲಿ ಇಂದು ಸೇರಿದ್ದ ಬಗ್ಗೆ ಮಾತನಾಡಿ, ಅವರೆಲ್ಲರೂ ಒಂದೆಡೆ ಸೇರಿರಬಹುದು. ಅವರೆಲ್ಲರೂ ಗೆಳೆಯರು, ಅದಕ್ಕೆ ಸೇರಿದ್ದಾರೆ ಅಷ್ಟೇ ಎಂದು ತಿಳಿಸಿದ ಸಚಿವ ಸತೀಶ್‌ ಜಾರಕಿಹೊಳಿ, ಕುಡಚಿ, ರಾಯಬಾಗ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರವಾಗಬಹುದು. ರಾಯಬಾಗ, ಕುಡಚಿ ನಡುವೆ ಎರಡು ಕ್ಷೇತ್ರಕ್ಕೆ ಸಮೀಪವಾಗಲಿ ಎಂಬ ದೃಷ್ಟಿಯಿಂದ  ಈಗಾಗಲೇ ಅಳಗವಾಡಿಯಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದೇವೆ. ಒಂದು ವರ್ಷದಲ್ಲಿ ಮನೆ ಸಂಪೂರ್ಣ ನಿರ್ಮಾಣವಾಗಲಿದೆ. ಮನೆ ನಿರ್ಮಾಣವಾದ ಬಳಿಕ ಆ ಭಾಗದ ಜನರನ್ನು ಅಲ್ಲಿಯೇ ಭೇಟಿಯಾಗಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಆಸೀಫ್‌ (ರಾಜು) ಸೇಠ್‌, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಇತರರ ಇದ್ದರು.
WhatsApp Group Join Now
Telegram Group Join Now
Share This Article