ಬೆಳಗಾವಿ,14: ಕರ್ನಾಟಕದಲ್ಲಿ ಇನ್ನು ನಾಲ್ಕು ವರ್ಷ ಕಾಂಗ್ರೆಸ್ ಸರ್ಕಾರವೇ ಇರಲಿದೆ. ಕಾಂಗ್ರೆಸ್ ಸರ್ಕಾರ ಉರುಳಿಸುವ ಪ್ರಶ್ನೆಯೇ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ನಮ್ಮಲ್ಲಿ ಜಗಳವಿದೆ ನಿಜ. ಆದರೆ, ಅದು ಪಕ್ಷದ ಆಂತರಿಕ ವಿಚಾರ. ನಮ್ಮದು ಪಾರ್ಟಿ ಜಗಳ ಹೊರತು, ಹೊರಗಿನ ಜಗಳವಲ್ಲ. ಪಕ್ಷದ ಹೊರಗೆ ಹೋಗುವ ಘರ್ಷಣೆಯಲ್ಲ. ಆಡಳಿತ ಇರುವ ಪಕ್ಷದಲ್ಲಿ ಸಮಸ್ಯೆ ಇದ್ದೇ ಇರುತ್ತದೆ. ಇದರಿಂದಾಗಿ ಸರ್ಕಾರವೇ ಬೀಳುತ್ತದೆ ಎನ್ನುವುದು ಸರಿಯಲ್ಲ. ಮಹಾರಾಷ್ಟ್ರಕ್ಕೆ ಕರ್ನಾಟಕವನ್ನು ಹೋಲಿಕೆ ಮಾಡುವುದು ಬೇಡ ಎಂದರು.
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆಗೆ ಮಾತನಾಡಲು ಸ್ವಾತಂತ್ರ್ಯ ಇದೆ, ಅವರು ಮಾತನಾಡುತ್ತಾರೆ. ಭಿನ್ನಮತ ಇದೆ ಎಂದು ಸರ್ಕಾರ ಬೀಳಿಸಲು ಆಗುತ್ತದೆಯೇ? ಶಾಸಕರ ಅಸಮಾಧಾನ ಇದೆ, ಅದಕ್ಕಾಗಿ ಸರ್ಕಾರ ಬೀಳುವುದಿಲ್ಲ. ಅಭಿವೃದ್ಧಿ, ವರ್ಗಾವಣೆ ವಿಚಾರದಲ್ಲಿ ಸಮಸ್ಯೆಗಳು ಇರುತ್ತವೆ. ಇದಕ್ಕೆಲ್ಲ ಸರ್ಕಾರ ಬೀಳುವುದಿಲ್ಲ ಎಂದು ಹೇಳಿದರು.
ಪಕ್ಷದಲ್ಲಿ ಏನೇ ಸಮಸ್ಯೆಗಳಿದ್ದರೂ ಅವುಗಳನ್ನು ಪಕ್ಷದ ವರಿಷ್ಠರು ಸರಿಮಾಡುತ್ತಾರೆ. ನಮ್ಮ ಮಟ್ಟದಲ್ಲಿರುವ ಸಮಸ್ಯೆಗಳನ್ನು ನಾವೇ ಸರಿಮಾಡಿಕೊಳ್ಳುತ್ತೇವೆ. ಸರ್ಕಾರವೇ ಬೀಳುತ್ತದೆ ಎನ್ನುವುದು ತಪ್ಪು ಎಂದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದರೆ ಮುಖ್ಯಮಂತ್ರಿ ರಾಜೀನಾಮೆ ನೀಡುವವರೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಇತಿಹಾಸದಲ್ಲೇ ಯಾವುದೇ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಮುಖ್ಯಮಂತ್ರಿ ರಾಜೀನಾಮೆ ನೀಡಿದ ಉದಾಹರಣೆ ಇಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಉತ್ತಮ ಆಡಳಿತ ಗಣನೆಗೆ ತೆಗೆದುಕೊಂಡು ಲೋಕಸಭಾ ಚುನಾವಣೆಯಲ್ಲಿ ಜನರು ತೀರ್ಮಾನ ಮಾಡಿದ್ದಾರೆ. ಈ ಚುನಾವಣೆಯಲ್ಲಿ ನಾವು 15- 20 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಸತೀಶ ಜಾರಕಿಹೊಳಿ ಹೇಳಿದರು.