ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ

Ravi Talawar
ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ
WhatsApp Group Join Now
Telegram Group Join Now
ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ 19 ಮತ್ತು 20 ರಂದು ಬೆಳಗಾವಿ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದೆ.‌ ನಿರಂತರ ಮಳೆಯಿಂದ ಘಟಪ್ರಭಾ, ಕೃಷ್ಣಾ, ದೂಧಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ ಹಾಗೂ ಮಲಪ್ರಭಾ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಆದ್ದರಿಂದ ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ  ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ವಿಷಯ ತಿಳಿಸಿದ ಅವರು, ಹಿಡಕಲ್ ಜಲಾಶಯ ಸಂಪೂರ್ಣ ತುಂಬಿಕೊಂಡಿರುವುದರಿಂದ ಪ್ರತಿದಿನ ಸಾವಿರಾರು ಕ್ಯೂಸೆಕ್ ನೀರು ಒಳಹರಿಯುತ್ತಿದ್ದು, ಈಗಾಗಲೇ 25,000 ಕ್ಕಿಂತ ಹೆಚ್ಚು ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಹಿಡಕಲ್ ಡ್ಯಾಂ ಹಿರಣ್ಯಕೇಶಿ, ಮಾರ್ಕಂಡೇಯ ಹಾಗೂ ಬಳ್ಳಾರಿ ನಾಲಾ ಸೇರಿ ಘಟಪ್ರಭಾ ನದಿಗೆ ಮಾತ್ರವೇ 40,000 ಕ್ಯೂಸೆಕ್ ನೀರು ಸೇರುತ್ತಿರುವುದರಿಂದ ಪ್ರವಾಹದ ಅಪಾಯ ಇನ್ನಷ್ಟು ಗಂಭೀರವಾಗಿದೆ.
ಈ ಹಿನ್ನೆಲೆಯಲ್ಲಿ, ನದಿಪಾತ್ರಗಳಲ್ಲಿ ವಾಸಿಸುತ್ತಿರುವ ರೈತರು ಹಾಗೂ ನಾಗರಿಕರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡುತ್ತೇನೆ. ಕೃಷ್ಣಾ ಮತ್ತು ಹಿರಣ್ಯಕೇಶಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸ್ಥಳಾಂತರಗೊಳ್ಳುವುದನ್ನು ನಿರ್ಲಕ್ಷಿಸದೆ ತಕ್ಷಣ ಕ್ರಮ ಕೈಗೊಳ್ಳಬೇಕು. ಹಲವಾರು ಸೇತುವೆಗಳು ಈಗಾಗಲೇ ಜಲಾವೃತಗೊಂಡಿರುವುದರಿಂದ ಸಂಚಾರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು.
ಜಿಲ್ಲೆಯ ಎಲ್ಲಾ ಶಾಲಾ ಮತ್ತು ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. ಪರಿಸ್ಥಿತಿಯನ್ನು ಮನಗಂಡು ಅಗತ್ಯವಿದ್ದಲ್ಲಿ ನಾಳೆಯೂ ರಜೆ ನೀಡಲಾಗುವುದು. ಮಕ್ಕಳು, ವೃದ್ಧರು ಹಾಗೂ ಮಹಿಳೆಯರ ಸುರಕ್ಷತೆಯನ್ನು ಪೋಷಕರು ವಿಶೇಷವಾಗಿ ಗಮನಿಸಬೇಕು. ಅಗತ್ಯ ವಸ್ತುಗಳನ್ನು ಮುಂಚಿತವಾಗಿ ಸಿದ್ಧಪಡಿಸಿಕೊಂಡು, ನದಿಪಾತ್ರ, ಸೇತುವೆ ಹಾಗೂ ನೀರಿನ ಹರಿವಿನ ಪ್ರದೇಶಗಳಿಗೆ ಹೋಗುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು.
ಜಿಲ್ಲಾ ಆಡಳಿತ, ಪೊಲೀಸ್ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಪಡೆಗಳೊಂದಿಗೆ ನಾನು ನಿರಂತರವಾಗಿ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ಸಮಗ್ರವಾಗಿ ನಿಗಾದಲ್ಲಿ ಇಟ್ಟುಕೊಂಡಿದ್ದೇನೆ. ನಾಗರಿಕರ ಜೀವದ ರಕ್ಷಣೆಯೇ ನಮ್ಮ ಮೊದಲ ಆದ್ಯತೆ. ಈ ಸಂಕಷ್ಟದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಜಾಗರೂಕರಾಗಿದ್ದು, ಪರಸ್ಪರ ಸಹಕಾರ ನೀಡುವ ಮೂಲಕ ತಮ್ಮ ಹಾಗೂ ತಮ್ಮ ಕುಟುಂಬದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ  ಸಚಿವ ಸತೀಶ್‌ ಜಾರಕಿಹೊಳಿ ಅವರು ವಿನಂತಿಸಿದ್ದಾರೆ.
WhatsApp Group Join Now
Telegram Group Join Now
Share This Article