ಮೃತ ಅಯ್ಯಪ್ಪ ಮಾಲಾಧಾರಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ: ಸಚಿವ ಸಂತೋಷ್​ ಲಾಡ್

Ravi Talawar
ಮೃತ ಅಯ್ಯಪ್ಪ ಮಾಲಾಧಾರಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ: ಸಚಿವ ಸಂತೋಷ್​ ಲಾಡ್
WhatsApp Group Join Now
Telegram Group Join Now

ಹುಬ್ಬಳ್ಳಿ, ಡಿಸೆಂಬರ್ 26: ಸಿಲಿಂಡರ್​​ ಸ್ಫೋಟದಿಂದ ಮೃತಪಟ್ಟ ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ಕುಟುಂಬದವರಿಗೆ ರಾಜ್ಯ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಮೃತ ನಿಜಲಿಂಗಪ್ಪ ಬೇಪುರಿ, ಸಂಜಯ್​​ ಸವದತ್ತಿ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್​ ಲಾಡ್ ಗುರುವಾರ ಘೋಷಣೆ ಮಾಡಿದ್ದಾರೆ.

ಮೃತರ ಕುಟುಂಬಕ್ಕೆ ಮುಖ್ಯಮಂತ್ರಿಗಳು ಸಹ ಸಾಂತ್ವನ ಹೇಳಿದ್ದಾರೆ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲಾಗಿದೆ ಎಂದು ಲಾಡ್​ ತಿಳಿಸಿದರು.

ಘಟನೆಯಲ್ಲಿ ಗಾಯಗೊಂಡಿರುವ ಇತರ 7 ಮಂದಿ ಗಾಯಾಳುಗಳಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಓರ್ವ ಬಾಲಕನ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ಕುಟುಂಬದವರ ಜತೆ ಚರ್ಚಿಸಿ ಇನ್ನು ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತದೆ ಎಂದು ಕಿಮ್ಸ್ ಆಸ್ಪತ್ರೆ ಬಳಿ ಸಚಿವ ಸಂತೋಷ್ ಲಾಡ್​ ತಿಳಿಸಿದರು.

ಶವಾಗಾರದ ಬಳಿ ಹೈಡ್ರಾಮಾ

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವಾಗಾರ ಬಳಿ ಹೈಡ್ರಾಮಾ ನಡೆದಿದೆ. ಮೃತ ನಿಜಲಿಂಗಪ್ಪನ ಶವಕ್ಕಾಗಿ ಇಬ್ಬರು ಹೆಂಡಿರು ಜಗಳವಾಡಿಕೊಂಡಿದ್ದಾರೆ. ನಿಜಲಿಂಗಪ್ಪ ಅವರ ಮೊದಲ ಮತ್ತು ಎರಡನೇ ಹೆಂಡತಿ ಜಗಳವಾಡಿದ್ದು, ತನ್ನ ಮನೆ ಬಳಿ ಪೂಜೆ ಮಾಡಲು ಮೊದಲು ಅವಕಾಶ ಮಾಡುವಂತೆ ಎರಡನೇ ಹೆಂಡತಿ ಆಗ್ರಹಿಸಿದ್ದಾರೆ. ಇಷ್ಟೇ ಅಲ್ಲದೆ, ಶವವನ್ನು ವಾಪಸ್ ಶವಾಗಾರಕ್ಕೆ ತಂದಿದ್ದಾರೆ.

ಎರಡನೇ ಹೆಂಡತಿ ಶಾಂತ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನನ್ನ ಮನೆಗೆ ಮೊದಲು ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿದ್ದಿರಿ. ಆದರೆ ಈಗ ಮೊದಲ ಹೆಂಡತಿ ಮನೆಗೆ ಕರೆದೊಯ್ಯುತ್ತಿದ್ದೀರಿ ಎಂದು ಕಿಡಿ ಕಾರಿದ್ದಾರೆ.

ನಿಜಲಿಂಗಪ್ಪ ಆಸ್ಪತ್ರೆ ಸೇರಿದಾಗ ಯಾರೂ ಬರಲಿಲ್ಲ. ಈಗ ಪರಿಹಾರ ಸಿಗುತ್ತದೆ ಎಂದು ಮೊದಲ ಹೆಂಡತಿ ಬಂದಿದ್ದಾಳೆ. ಇದಕ್ಕೆ ನೀವೆಲ್ಲ ಅವಕಾಶ ಮಾಡಿಕೊಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಮಧ್ಯಪ್ರವೇಶದ ನಂತರ ಪರಿಸ್ಥಿತಿ ತಿಳಿಗೊಂಡಿದೆ. ನಂತರ ಶವವನ್ನು ತೆಗೆದುಕೊಂಡು ಹೋಗಲು ಶಾಂತ ಒಪ್ಪಿದ್ದಾರೆ.

WhatsApp Group Join Now
Telegram Group Join Now
Share This Article