ಮಹಿಳಾ ಪ್ರಯಾಣಿಕರಿಗೆ ಟಿಕೆಟ್ ವಿತರಿಸಿ, ಶಕ್ತಿ ಯೋಜನೆಯ ಪೊಸ್ಟರ್ ಬಿಡುಗಡೆ ಮಾಡಿದ ಸಚಿವ ಸಂತೋಷ ಲಾಡ್

Ravi Talawar
ಮಹಿಳಾ ಪ್ರಯಾಣಿಕರಿಗೆ ಟಿಕೆಟ್ ವಿತರಿಸಿ, ಶಕ್ತಿ ಯೋಜನೆಯ ಪೊಸ್ಟರ್ ಬಿಡುಗಡೆ ಮಾಡಿದ ಸಚಿವ ಸಂತೋಷ ಲಾಡ್
WhatsApp Group Join Now
Telegram Group Join Now
ಹುಬ್ಬಳ್ಳಿ :  ಭಾರತ ದೇಶದಲ್ಲಿ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸಲು ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಈಗಾಗಲೇ ಶಕ್ತಿ ಯೋಜನೆಯಡಿ 500 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಸುಮಾರು 12 ಸಾವಿರ ಕೋಟಿ ಹಣ ಖರ್ಚಾಗಿದೆ. ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯು ಅತ್ಯಂತ ಯಶಸ್ವಿಯಾಗಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಹೇಳಿದರು.
ಇಂದು ಹೊಸುರ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯಡಿ ಇಲ್ಲಿಯವರೆಗೆ 500 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿ, ಯೋಜನೆ ಯಶಸ್ವಿಯಾಗಿಸಿದ ನಿಮಿತ್ತ ಸರ್ಕಾರಿ ಬಸ್ ಗಳಿಗೆ ಪೂಜೆ ಹಾಗೂ ಸಿಹಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ, ಮಾತನಾಡಿದರು.
ರಾಜ್ಯದಾದ್ಯಂತ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಐತಿಹಾಸಿಕ ಕಾರ್ಯಕ್ರಮವನ್ನು ರಾಜ್ಯದ ವಿವಿಧೆಡೆ ಆಯೋಜನೆ ಮಾಡಲಾಗಿದೆ. ಈ ಯೋಜನೆ ಯಶಸ್ವಿಯಾಗಲು ಸರ್ಕಾರದ ಜೊತೆಗೆ ಸಾರಿಗೆ ಇಲಾಖೆಯ ಸಿಬ್ಬಂದಿಗಳ ಕಾರ್ಯ ಪ್ರಮುಖವಾಗಿದೆ. ಅದರಲ್ಲೂ ಚಾಲಕರು, ನಿರ್ವಾಹಕರು, ಕ್ಲೀನರ್‌‌ಗಳು, ಅಧಿಕಾರಿಗಳು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಬಸ್ ಗಳಿವೆ. 25 ಸಾವಿರಕ್ಕೂ ಹೆಚ್ಚು ಬಸ್ ಗಳು ಕರ್ನಾಟಕ ರಾಜ್ಯದಲ್ಲಿವೆ. ಪ್ರತಿದಿನ ಸುಮಾರು 1.20 ಕೋಟಿ ಜನ ಪ್ರಯಾಣಿಕರು ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಮೊದಲು 80 ಸಾವಿರ ಪಾಸ್ ಗಳಿದ್ದವು. ಪ್ರಸ್ತುತ 1.17 ಲಕ್ಷ ಪಾಸಗಳಿವೆ. ಶೇ. 45 ರಷ್ಟು ಮಹಿಳಾ ಪ್ರಯಾಣಿಕರು ಹೆಚ್ಚಳವಾಗಿದ್ದಾರೆ. ಅಲ್ಲದೇ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಆ ಮೂಲಕ ಉದ್ಯೋಗಗಳ ಸೃಷ್ಟಿ  ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿವೆ ಎಂದರು.
ಸಾರಿಗೆ ಇಲಾಖೆಯಲ್ಲಿ 10 ಸಾವಿರಕ್ಕೂ ಅಧಿಕ ಉದ್ಯೋಗಗಳನ್ನು ಭರ್ತಿ ಮಾಡಲಾಗಿದೆ. 5 ಸಾವಿರ ಹೊಸ ಬಸ್ ಗಳನ್ನು ಖರೀದಿಸಲಾಗಿದೆ. ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚು ಬಸ್ ಗಳು ಸಂಚಾರ ಮಾಡುತ್ತಿವೆ. ಕಳೆದ ಎರಡು ವರ್ಷದಲ್ಲಿ ಸುಮಾರು 150 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದೇವೆ. 2019 ರ ಡಿಸೇಲ್ ದರಕ್ಕೂ ಇಂದಿನ ಡೀಸೆಲ್ ದರಕ್ಕೂ ರೂ. 30 ರಿಂದ 40 ರಷ್ಟು ಹೆಚ್ಚಳವಾಗಿದೆ. ಸಂಬಳದಲ್ಲಿ ಶೇ. 15 ರಷ್ಟು ಹೆಚ್ಚಿಸಲಾಗಿದೆ. ರಾಜ್ಯದ ವಿವಿಧ ಪ್ರಸಿದ್ಧ ದೇವಾಲಯಗಳು, ಮಂದಿರಗಳು ಹಾಗೂ ಪ್ರವಾಸಿ ತಾಣಗಳಿಗೆ ಮಹಿಳೆಯರು ಭೇಟಿ ನೀಡುತ್ತಿದ್ದಾರೆ. 5600 ಬಸ್ ಗಳಲ್ಲಿ 5 ಸಾವಿರ ಬಸ್ ಗಳನ್ನು ಖರೀದಿ ಮಾಡಲಾಗಿದೆ‌.  ಹೊಸದಾಗಿ 300 ಬಸ್ ಗಳು ಬರಲಿವೆ ಎಂದು ಅವರು ತಿಳಿಸಿದರು.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ್ ಎಂ. ಮಾತನಾಡಿ, 2023 ರಲ್ಲಿ ಶಕ್ತಿ ಯೋಜನೆಯನ್ನು ಜಾರಿಗೆ‌ ತರಲಾಯಿತು. ಅಂದಿನಿಂದ ಇಲ್ಲಿಯವರೆಗೆ ಸುಮಾರು 500 ಕೋಟಿ ಮಹಿಳೆಯರು ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣ ಮಾಡಿದ್ದಾರೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಸುಮಾರು 114 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಪ್ರತಿದಿನ ಸರಿಸುಮಾರು 16 ಲಕ್ಷ ಮಹಿಳೆಯರು ಪ್ರಯಾಣ ಮಾಡುತ್ತಿದ್ದು, ಸುಮಾರು 4 ಕೋಟಿ ಶೂನ್ಯ ದರದ ಟಿಕೇಟ್ ಗಳನ್ನು ನೀಡಲಾಗುತ್ತಿದೆ. ಪ್ರತಿ ತಾಲೂಕು ಹಾಗೂ ವಿಭಾಗ ಮಟ್ಟದಲ್ಲಿ ಈ ಕಾರ್ಯಕ್ರಮ ಜರುಗುತ್ತಿದೆ. ಪುರುಷ ಹಾಗೂ ಮಹಿಳಾ ಪ್ರಯಾಣಿಕರು ಸೇರಿ ಪ್ರತಿದಿನ 25 ಲಕ್ಷ ಪ್ರಯಾಣಿಕರು ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಶಕ್ತಿ ಯೋಜನೆಯು ಬಹಳ ಯಶಸ್ವಿಯಾಗಿ ಮುನ್ನೆಡೆಯುತ್ತಿದೆ. ಸಂಸ್ಥೆಯಲ್ಲಿ 5300 ಬಸ್ ಗಳಿದ್ದು, ಪ್ರತಿದಿನ 38 ಸಾವಿರ ಟ್ರಿಪ್ ಗಳನ್ನು ಓಡಿಸಲಾಗುತ್ತಿದೆ. ಶಕ್ತಿ ಯೋಜನೆಗಿಂತ ಮುಂಚೆ 34 ಸಾವಿರ ಟ್ರಿಪ್ ಗಳನ್ನು ಓಡಿಸಲಾಗುತ್ತಿತ್ತು. ಕಳೆದ ಎರಡು ವರ್ಷಗಳಲ್ಲಿ 856 ಹೊಸ ಬಸ್ ಗಳು ಬಂದಿವೆ. ಹೊಸ ನೇಮಕಾತಿ ಪ್ರಕ್ರಿಯೆ ನಡೆಯುತ್ತಿವೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಚಿವರು ಮಹಿಳಾ ಪ್ರಯಾಣಿಕರಿಗೆ ಸಿಹಿ‌ ತಿನ್ನಿಸಿ, ಟಿಕೆಟ್ ವಿತರಿಸಿದರು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
 ಕರ್ನಾಟಕ ಕೊಳಚೆ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾದ ಅಬ್ಬಯ್ಯ ಪ್ರಸಾದ, ಶಾಸಕರಾದ ಎನ್.ಎಚ್.ಕೋನರಡ್ಡಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಸಿಬ್ಬಂದಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಐ. ಜಿ. ಸನದಿ, ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ, ಎಂ.ಎಸ್.ಅಕ್ಕಿ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ. ಆರ್.ಜೆ., ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ಮಿರ್ದೇಶಕಿ ಪ್ರಿಯಾಂಗಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾ ಬ್ಯಾಕೋಡ್, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ,
 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ಧಾರವಾಡ ಜಿಲ್ಲಾಧ್ಯಕ್ಷ ಶ್ಯಾನಪ್ಪಗೌಡ.ಆರ್.ಪಾಟೀಲ, ಪ್ರಾಧಿಕಾರದ ಸದಸ್ಯರು  ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article