ಹುಬ್ಬಳ್ಳಿ, ಆಗಸ್ಟ್̇28: ಕಲಘಟಗಿ ಪಟ್ಟಣದ ಹೊರ ವಲಯದಲ್ಲಿರುವ ತಡಸ್ ಕ್ರಾಸ್ ಬಳಿ ಲಾರಿ ಮತ್ತು ಟಾಟಾ ಏಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಗಾಯಾಳುಗಳ ಸಂಬಂಧಿಕರನ್ನು ಮಾತನಾಡಿಸಿ ಧೈರ್ಯ ತುಂಬಿದ ಸಚಿವರು, ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರು ಅಪಘಾತವಾದ ಟಾಟಾ ಏಸ್ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಒಬ್ಬರು ಮಹಿಳೆ ಮೃತಪಟ್ಟಿದ್ದು, 19 ಜನರಿಗೆ ಗಾಯವಾಗಿದೆ. ಟಾಟಾ ಏಸ್‌ನಲ್ಲಿ ೨೪ ಜನರಿದ್ದರು. ತಾರಿಹಾಳ್ ಹತ್ತಿರದ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವ ಹೆಚ್ಚಿನವರು ಈ ಟಾಟಾ ಏಸ್‌ನಲ್ಲಿದ್ದರು. ಗಾಯಾಳು ಎಲ್ಲರನ್ನೂ ಭೇಟಿ ಮಾಡಿದ್ದೇನೆ” ಎಂದು ತಿಳಿಸಿದರು.
ಗಾಯಗೊಂಡು ಇಲ್ಲವೇ ವಿವಿಧ ಆರೋಗ್ಯ ಸಮಸ್ಯೆಗೆ ಕಿಮ್ಸ್ ನಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ತ್ವರಿತವಾಗಿ ಚಿಕಿತ್ಸೆ ಲಭ್ಯವಾಗುತ್ತಿಲ್ಲ ಎಂಬ ದೂರುಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಹೆಚ್ಚಿನ ವೇಳೆ ಚಿಕಿತ್ಸೆಯನ್ನು ವೈದ್ಯರು ನೀಡುತ್ತಾರೆ. ಶೇಖಡಾ ಇಪ್ಪತ್ತರಷ್ಟು ನಿರ್ಲಕ್ಷ್ಯ ಇರುತ್ತದೆ. ಇನ್ನು ಮುಂದೆ ದೂರು ಪೆಟ್ಟಿಗೆ ಇರಿಸಲು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸುತ್ತೇನೆ. ಸಂಬಂಧಿಸಿದ ಸಚಿವರೂ ಈ ಬಗ್ಗೆ ಮಾತನಾಡುತ್ತೇನೆ. ಮುಂದಿನ ವಾರದೊಳಗೆ ದೂರು ಸಲ್ಲಿಸಲು ಪೆಟ್ಟಿಗೆ ಇಡಲಾಗುವುದು. ಆಗ ಏನು ಸಮಸ್ಯೆ ಆಗಿದೆ ಎಂಬುದು ತಿಳಿಯಲಿದೆ” ಎಂದರು.
ಅಪಘಾತ ಸಂತ್ರಸ್ತರಿಗೆ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾತನಾಡಲಾಗುವುದು. ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಹೇಳಿದರು.