ಬೆಂಗಳೂರು, ಡಿಸೆಂಬರ್ 30: ಡಿ.31ರಿಂದ ಸಾರಿಗೆ ಇಲಾಖೆ ಸಿಬ್ಬಂದಿ ಮುಷ್ಕರಕ್ಕೆ ಕರೆ ಹಿನ್ನೆಲೆ ಇಂದು ಸಿಎಂ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಸಾರಿಗೆ ಇಲಾಖೆ 4 ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಭಾಗಿಯಾಗಿದ್ದರು. ಈ ವೇಳೆ ಸಾರಿಗೆ ಸಿಬ್ಬಂದಿ ಬೇಡಿಕೆ ಬಗ್ಗೆ ಸಿಎಂಗೆ ಮನವರಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಸಿಎಂ ಗುಡ್ ನ್ಯೂಸ್ ಕೊಡುತ್ತಾರಾ ಎಂದು 1 ಲಕ್ಷದ 17 ಸಾವಿರ ಸಾರಿಗೆ ನೌಕರರು ಕಾದು ಕುಳಿತ್ತಿದ್ದಾರೆ.
ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಸಾರಿಗೆ ಸಿಬ್ಬಂದಿ ಮುಷ್ಕರದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇವೆ. ಬಿಜೆಪಿ ಸರ್ಕಾರ 5900 ಕೋಟಿ ರೂ. ಸಾಲ ಬಿಟ್ಟು ಹೋಗಿದ್ದೇ ಸಮಸ್ಯೆಗೆ ಕಾರಣವಾಗಿದೆ. ಫೆಬ್ರವರಿ ಬಜೆಟ್‌ನಲ್ಲಿ ಇಲಾಖೆಗೆ ಅನುದಾನ ನೀಡಿ ಅಂತಾ ಬೇಡಿಕೆ ಇಟ್ಟಿದ್ದೇನೆ. ಸಂಕ್ರಾಂತಿ ಹಬ್ಬದ ಬಳಿಕ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದ್ದಾರೆ.
ಬಸ್ ನಿಲ್ಲಿಸುತ್ತೇವೆಂದು ಹೇಳಿದ್ದಾರೆ, ಅದನ್ನು ಮುಂದೂಡಿ ಅಂತಾ ಹೇಳಿದ್ದೇವೆ. ಸಾರಿಗೆ ಸಿಬ್ಬಂದಿಯ ಬೇಡಿಕೆ ವಿಚಾರದಲ್ಲಿ ನಾವು ಪಾಸಿಟಿವ್ ಆಗಿದ್ದೇವೆ. ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಬಗ್ಗೆಯೂ ನೌಕರರಿಗೆ ಗೊತ್ತಿದೆ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲೂ ಸಮಾನ ವೇತನದ ಬಗ್ಗೆ ಹೇಳಿದ್ದೇವೆ. ಈಗಾಗಲೇ ಇಲಾಖೆಗೆ ಸರ್ಕಾರ 220 ಕೋಟಿ ರೂ. ಬಿಡುಗಡೆ ಮಾಡಿದೆ ಎಂದಿದ್ದಾರೆ.
ಪಿಎಫ್ ಹಣ ಸಂಬಂಧ 2 ಸಾವಿರ ಕೋಟಿ ರೂ. ಬಿಡುಗಡೆಗೆ ಮನವಿ ಸಲ್ಲಿಸಿದ್ದೇನೆ. ಇದನ್ನು ಕ್ಯಾಬಿನೆಟ್‌ನಲ್ಲಿಟ್ಟಿದ್ದೇವೆ, ವೇತನ ಪರಿಷ್ಕರಣೆ ಬಗ್ಗೆಯೂ ಹೇಳಿದ್ದೇವೆ. ಪಾಸಿಟಿವ್ ಮೈಂಡ್‌ನಲ್ಲಿದ್ದೇವೆ, ನೌಕರರು ಒಪ್ಪುತ್ತಾರೆಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.