ಬೆಂಗಳೂರು,11: ”ಬಿಜೆಪಿಯವರು ಈಗಾಗಲೇ ಶಸ್ತ್ರತ್ಯಾಗ ಮಾಡಿದ್ದಾರೆ. ಚುನಾವಣೆಯಲ್ಲಿ ನಾವು ಮೆಲುಗೈ ಸಾಧಿಸುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಸೀಟ್ ಗೆಲ್ಲುತ್ತೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ”ನಮ್ಮ ಕೆಲಸ, ಗ್ಯಾರಂಟಿ ನೋಡಿ ಜನ ಆಶೀರ್ವಾದ ಮಾಡುತ್ತಾರೆ. ನಾವು 14 -16 ಸೀಟ್ ಗೆಲ್ಲುವ ಸಾಧ್ಯತೆಯಿದೆ. ಹಳ್ಳಿ ಭಾಗದಲ್ಲಿ ಮೋದಿ ಅಲೆ ಇಲ್ಲ. ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಹೀಗಾಗಿ, ಹೆಚ್ಚು ಸ್ಥಾನ ನಾವು ಗೆಲ್ಲಲಿದ್ದೇವೆ” ಎಂದು ಅವರು ವಿಶ್ವಾಸ ವ್ಯಕ್ರಪಡಿಸಿದರು.
ಹಾಸನ ಪೆನ್ ಡ್ರೈವ್ ವಿಡಿಯೋ ಸಂತ್ರಸ್ತೆಯರ ಮೇಲೆ ಒತ್ತಡ ಹೇರಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ”ಸಂತ್ರಸ್ತರಿಗೆ ನೈತಿಕ ಬಲ ಕೊಡಬೇಕಿದೆ. ಮುಖ, ಹೆಸರು ಹೊರಗೆ ಬಾರದ ಹಾಗೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎಸ್ಐಟಿ ನೈತಿಕ ಬಲ ತುಂಬಬೇಕು. ರಾಷ್ಟ್ರೀಯ ಮಹಿಳಾ ಆಯೋಗ ಸುಮ್ಮನೆ ಆರೋಪಿಸುತ್ತಿದೆ” ಎಂದು ದೂರಿದರು.
”ಈ ಕೃತ್ಯ ಮಾಡಿದ್ದು, ವಿಡಿಯೋ ಮಾಡಿದ್ದು ಪ್ರಜ್ವಲ್. ಡ್ರೈವರ್ ಮೂಲಕ ವಿಡಿಯೋ ಹಂಚಿಕೆಯಾಗಿದೆ. ಬಿಜೆಪಿ, ಜೆಡಿಎಸ್ ನಾಯಕರು ಖಂಡನೆ ಮಾಡಿಲ್ಲ. ತನಿಖೆಗೆ ಸಹಕಾರ ಕೊಡುವ ಬಗ್ಗೆ ಮಾತನಾಡುತ್ತಿಲ್ಲ. ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ನಡೆದಿದೆ. ತಪ್ಪು ಮಾಡಿದ್ದರ ಬಗ್ಗೆ ಮಾತನಾಡುತ್ತಿಲ್ಲ. ಈ ಬಗ್ಗೆ ದೇವರಾಜೇಗೌಡ ಬಿಜೆಪಿ ವರಿಷ್ಠರಿಗೆ ಮಾಹಿತಿ ನೀಡಿದ್ದ. ಹಾಗಿದ್ದೂ ಟಿಕೆಟ್ ಕೊಟ್ಟಿದ್ದು ಯಾಕೆ?. ಸಂತ್ರಸ್ತರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಪ್ರಜ್ವಲ್ ರೇವಣ್ಣಗೆ ಮತ ಹಾಕಿ ಅಂತ ಮೋದಿ ಹೇಳಿದ್ರು. ಎಲ್ಲ ವಿಚಾರ ಬಿಜೆಪಿ ನಾಯಕರಿಗೆ ಗೊತ್ತೆಂದು ದೇವರಾಜೇಗೌಡ ಸ್ಪಷ್ಟವಾಗಿ ಹೇಳಿದ್ದಾರೆ” ಎಂದು ತಿಳಿಸಿದರು.
”ಸಿಎಂ, ಡಿಸಿಎಂ ಬಗ್ಗೆ ಮಾತನಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರನ್ನು ಸಿಕ್ಕಿಸುವ ಕೆಲಸ ನಡೆಯುತ್ತಿದೆ. ಯಾವ ರೀತಿಯಲ್ಲಿ ಪೆನ್ ಡ್ರೈವ್ ಹಂಚಿಕೆಯಾಯ್ತು?. ಯಾಕೆ ಬಿಜೆಪಿ ನಾಯಕರು ಮಾತನಾಡುತ್ತಿಲ್ಲ?. ಹುಬ್ಬಳ್ಳಿ ಘಟನೆಯಲ್ಲಿದ್ದ ಆಸಕ್ತಿ ಇಲ್ಯಾಕ್ಕಿಲ್ಲ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
”30 ಸೆಕೆಂಡ್ ಆಡಿಯೋದಲ್ಲಿ ಡಿ.ಕೆ.ಶಿವಕುಮಾರ್ ಅವರ ಧ್ವನಿ ಇರುವುದು ನಿಜ ಎಂದಾದರೆ, ಅಮಿತ್ ಶಾ ನಿರ್ದೇಶನ ಮಾಡಿದ್ದು ಕೂಡ ನಿಜ. ಅಮಿತ್ ಶಾ ಅವರೇ ನಿರ್ದೇಶಕರಾಗಿರಬೇಕು. ಜೆಡಿಎಸ್ನವರೇ ನಿರ್ಮಾಪಕರು ಆಗಿರಬಹುದು” ಎಂದು ಆರೋಪಿಸಿದರು.
ಪ್ರಜ್ವಲ್ ರೇವಣ್ಣ ಕರೆತರುವ ವಿಚಾರವಾಗಿ ಪ್ರತಿಕ್ರಿಯಿಸುತ್ತ, ”ಎಸ್ಐಟಿ, ಗೃಹ ಇಲಾಖೆ ಅವರ ಕೆಲಸ ಮಾಡುತ್ತಿದ್ದಾರೆ. ಕರೆ ತರುವುದಕ್ಕೆ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಆಗಲ್ಲ. ರಾಮೇಶ್ವರಂ ಕೆಫೆ ಬಗ್ಗೆಯೂ ನಮ್ಮ ಪೊಲೀಸರು ಕೆಲಸ ಮಾಡಿದ್ದಾರೆ. ಹಾಗಾಗಿ, ಯಾರನ್ನು ಹೇಗೆ ಕರೆದುಕೊಂಡು ಬರಬೇಕೋ, ಬರ್ತಾರೆ” ಎಂದು ತಿಳಿಸಿದರು.