ಅನ್ಯ ಜಾತಿಯವರನ್ನೂ ಪ್ರೀತಿಸಿ, ಗೌರವಿಸಿದರಷ್ಟೇ ಬಸವ ತತ್ವಕ್ಕೆ ಅರ್ಥ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Hasiru Kranti
ಅನ್ಯ ಜಾತಿಯವರನ್ನೂ ಪ್ರೀತಿಸಿ, ಗೌರವಿಸಿದರಷ್ಟೇ ಬಸವ ತತ್ವಕ್ಕೆ ಅರ್ಥ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌
WhatsApp Group Join Now
Telegram Group Join Now
ಅರಳಿಕಟ್ಟಿ ಸಂಭ್ರಮ’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು
ಬೆಳಗಾವಿ: ಮನುಷ್ಯ ಬದುಕಿದ್ದಾಗ ಎಲ್ಲರನ್ನೂ ಪ್ರೀತಿಸಬೇಕು, ಬೇರೆ ಜಾತಿಯವರನ್ನೂ ಪ್ರೀತಿಸಿ ಗೌರವಿಸಬೇಕು, ಆವಾಗ ಮಾತ್ರ ಬಸವ ತತ್ವ, ಬಸವ ಪರಂಪರೆಗೆ ಅರ್ಥ ಸಿಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.
ಅರಳಿಕಟ್ಟಿ ಗ್ರಾಮದ ತಪೋಕ್ಷೇತ್ರ ಶ್ರೀ ತೋಂಟದಾರ್ಯ ವಿರಕ್ತಮಠದ ಜಾತ್ರಾ ಮಹೋತ್ಸವ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ‘ ಶ್ರೀ ಉಳವಿ ಚನ್ನಬಸವೇಶ್ವರರ ಜೀವನ ದರ್ಶನ ಪ್ರವಚನ’ ಹಾಗೂ ‘ಅರಳಿಕಟ್ಟಿ ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಇಂದಿನ ಮಕ್ಕಳಿಗೆ ನಾವು ಪುರಾಣದ ಬಗ್ಗೆ ಅರ್ಥೈಸಿದರೆ ಮಾತ್ರ ಅವರು ಮುಂದಿನ ಪೀಳಿಗೆಗೆ ಕೊಂಡೊಯ್ಯುವರು ಎಂದರು.
ಭಾರತದ ಅಚಾರ, ಪರಂಪರೆ ಹಾಗೂ ಸಂಸ್ಕೃತಿ ಇಡೀ ವಿಶ್ವಕ್ಕೆ ಶ್ರೀಮಂತವಾಗಿದೆ. ವೈವಿದ್ಯದಿಂದ ಕೂಡಿರುವ ಸಂಸ್ಕೃತಿ ನಮ್ಮದು, ನಮ್ಮ ಧರ್ಮ ಪರಂಪರೆಯನ್ನು ಇಡೀ ವಿಶ್ವವೇ ಕೊಂಡಾಡುತ್ತದೆ. ಇದಕ್ಕೆ ಪ್ರಮುಖ ಕಾರಣವೇ ನಮ್ಮ ಸ್ವಾಮೀಜಿಗಳು. ನಮ್ಮ ಸಮಾಜದ ಏಳಿಗೆಗಾಗಿ ಹೆತ್ತ ಮಕ್ಕಳನ್ನೇ ತ್ಯಾಗ ಮಾಡಿರುವ ಸ್ವಾಮೀಜಿಯವರ ತಾಯಂದಿರ ತ್ಯಾಗಕ್ಕಿಂತ ದೊಡ್ಡದು ಇನ್ನೊಂದಿಲ್ಲ ಎಂದು ಸಚಿವರು ತಿಳಿಸಿದರು.
ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಸವ ದೇವಸ್ಥಾನಕ್ಕೆ ಈಗಾಗಲೇ 50 ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ. ಗ್ರಾಮದ ರಸ್ತೆಗಳ ನಿರ್ಮಾಣ, ಶಾಲಾ ಕೊಠಡಿ, ಸೇತುವೆ ನಿರ್ಮಾಣಕ್ಕೂ ಹಣ ಬಿಡುಗಡೆ ಮಾಡಲಾಗಿದೆ. ಕಾಯಕವೇ ಕೈಲಾಸ ಎಂದು ನಂಬಿರುವಳು ನಾನು, ಕಳೆದ ಏಳೂವರೆ ವರ್ಷಗಳಿಂದ ಕಾಲಿಗೆ ಚಕ್ರಕಟ್ಟಿಕೊಂಡಂತೆ ಓಡಾಡುತ್ತಿರುವೆ. ಕಳೆದ ಎರಡೂವರೆ ವರ್ಷಗಳಿಂದ ಸಚಿವೆಯಾಗಿ ರಾಜ್ಯಾದ್ಯಾಂತ ಓಡಾಡುತ್ತಿರುವೆ ಎಂದ ಸಚಿವರು, ಗೃಹಲಕ್ಷ್ಮೀ ಯೋಜನೆಯಿಂದ ಬರುವ ಎರಡು ಸಾವಿರ ರೂಪಾಯಿ ಮಹಿಳೆಯರ ಪಾಲಿಗೆ ಸಾಕಷ್ಟು ಅನುಕೂಲ ಆಗಿದೆ. 1.24 ಕೋಟಿ ಮಹಿಳೆಯರು ಈ ಯೋಜನೆ ಲಾಭ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಗುಬ್ಬಲಗುಡ್ಡದ ಶ್ರೀ ಕೆಂಪಯ್ಯಸ್ವಾಮಿ ಮಠ ಘಟಪ್ರಭಾದ ಶ್ರೀ ಮ.ನಿ.ಪ್ರ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹಾಗೂ ನೇತೃತ್ವವನ್ನು ಅರಳಿಕಟ್ಟಿಯ ತೋಂಟದಾರ್ಯ ವಿರಕ್ತಮಠದ ಶ್ರೀ ಮ.ನಿ.ಪ್ರ ಶಿವಮೂರ್ತಿ ಮಹಾಸ್ವಾಮಿಗಳು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹರ್ತಿಹಿರೇಮಠ ಹರ್ಲಾಪುರ ಗದಗಿನ ವೇದಮೂರ್ತಿ ಶ್ರೀ ಸದಾನಂದ ಶಾಸ್ತ್ರಿಗಳು, ಬಳುಟಗಿಯ ಶ್ರೀ ಶಿವಕುಮಾರ ದೇವರು, ಕಾರಂಜಿಮಠ ಬೆಳಗಾವಿಯ ಡಾ. ಶಿವಯೋಗಿ ದೇವರು, ಹಿಡಕಲ್ ಡ್ಯಾಮ್ ನ ಡಾ. ಶಿವಶರಣ ದೇವರು, ಹೊನ್ನಿಹಾಳ ಹಿರೇಮಠ ಶ್ರೀ ಬಸವರಾಜ ದೇವರು, ಗದಗನ ಶಿವಲಿಂಗಯ್ಯ ಗವಾಯಿಗಳು, ಪಂಚಾಕ್ಷರಿ ಹೂಗಾರ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಅಂಬೇಡ್ಕರ್‌ ಭವನ, ಬಸ್‌ ನಿಲ್ದಾಣ ಉದ್ಘಾಟನೆ : ಅರಳಿಕಟ್ಟಿ ಗ್ರಾಮದಲ್ಲಿ ಸುಮಾರು 25 ಲಕ್ಷ ರೂ,ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನ ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ನೂತನವಾಗಿ ನಿರ್ಮಾಣಗೊಂಡಿರುವ ಬಸ್ ನಿಲ್ದಾಣವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು ಉದ್ಘಾಟಿಸಿದರು.
ಈ ನೂತನ ಅಂಬೇಡ್ಕರ್‌ ಭವನ ಗ್ರಾಮದ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರಮುಖ ಕೇಂದ್ರವಾಗಲಿದ್ದು, ಗ್ರಾಮಸ್ಥರಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗಲಿದೆ. ಸಂವಿಧಾನ ಶಿಲ್ಪಿಯವರ ತತ್ವ ಆದರ್ಶಗಳನ್ನು ಪಸರಿಸುವ ಮತ್ತು ಸಮುದಾಯದ ಬಾಂಧವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಈ ಕಟ್ಟಡ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಅಡಿವೇಶ ಇಟಗಿ, ರಾಘು ಪಾಟೀಲ, ಪ್ರಕಾಶ ಜಪ್ತಿ, ನಿಂಗಪ್ಪ ತಳವಾರ, ಸಿದ್ದಪ್ಪ ಸಿಂಗಾಡಿ, ಅಣ್ಣಪ್ಪ ಪಾಟೀಲ, ಉಮೇಶ ಪಾಟೀಲ, ಬಸವರಾಜ ಸತ್ತಿಗೇರಿ, ಪಾರವ್ವ ಹುದ್ದಾರ, ಕಾಶವ್ವ ಅಗಸಗಿ, ನಿಂಗವ್ವ ಅಗಸಗಿ, ಸಂಗೀತಾ ಕರಲಿಂಗನವರ, ಪ್ರಕಾಶ ಅಕ್ಕಮಯಿ, ಬಸವರಾಜ ಸಿಂಗಾಡಿ, ವಿಶಾಲ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article