ಬೆಂಗಳೂರು, ಜುಲೈ 16: ಇನ್ಮುಂದೆ ಶಾಲೆಗಳಲ್ಲಿ ಲಾಸ್ಟ್ ಬೆಂಚ್, ಫಸ್ಟ್ ಬೆಂಚ್ ವಿದ್ಯಾರ್ಥಿಗಳು ಎಂಬ ವಿಧಾನಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಸಿನಿಮಾ ಒಂದರ ಪ್ರೇರಣೆ ಪಡೆದು ಈಗಾಗಲೇ ಕೇರಳದಲ್ಲಿನ ಶಾಲೆಗಳಲ್ಲಿ ಅರ್ಧವೃತ್ತಾಕಾರದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದೀಗ ಇದೇ ಮಾದರಿಯನ್ನು ಕರ್ನಾಟಕದ ಶಾಲೆಗಳಲ್ಲಿಯೂ ಜಾರಿ ಮಾಡುವಂತೆ ಒತ್ತಾಯ ಕೇಳಿ ಬರುತ್ತಿದೆ. ಈ ಕುರಿತಾಗಿ ಮಕ್ಕಳ ಹಕ್ಕುಗಳ ಹೋರಾಟಗಾರರು ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಶಾಲೆಗಳಲ್ಲಿ ಅರ್ಧವೃತ್ತಾಕಾರದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ
ಕೇರಳದ ಶಾಲೆಗಳಲ್ಲಿ ಅರ್ಧವೃತ್ತಾಕಾರದ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಈ ಮಾದರಿ ಕಲಿಕೆಯ ಪರಿಣಾಮಕಾರಿತ್ವ ಹೆಚ್ಚಿಸಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಂವಾದವನ್ನು ಸುಧಾರಿಸುವಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ. ಅರ್ಧವೃತ್ತಾಕಾರದ ವಿಧಾನದಲ್ಲಿ ಎಲ್ಲ ವಿದ್ಯಾರ್ಥಿಗಳೂ ಶಿಕ್ಷಕರಿಗೆ ಒಂದೇ ದೃಷ್ಟಿಯಲ್ಲಿ ಕಾಣಿಸುತ್ತಾರೆ. ಇದು ಸಮಾನತೆಯ ಭಾವನೆಯನ್ನು ಮೂಡಿಸುತ್ತದೆ ಮತ್ತು ಎಲ್ಲರಿಗೂ ಸಮಾನವಾಗಿ ಭಾಗವಹಿಸುವ ಅವಕಾಶವನ್ನು ಒದಗಿಸುತ್ತದೆ. ಹೀಗಾಗಿ ರಾಜ್ಯದ ಶಾಲೆಗಳಲ್ಲಿ ಈ ನಿಯಮ ಜಾರಿಗೆ ಒತ್ತಾಯ ಕೇಳಿ ಬಂದಿದೆ.