*ಬೆಂಗಳೂರು: ಮಕ್ಕಳ ಭವಿಷ್ಯವನ್ನು ಮತ್ತಷ್ಟು ಉಜ್ವಲಗೊಳಿಸುವ ಜವಾಬ್ದಾರಿಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲಿದೆ; ಅದನ್ನು ಇಲಾಖಾ ಸಚಿವರಾದ ಲಕ್ಷ್ಮೀ ಹೆಬ್ಭಾಳಕರ್ ಅವರು ಅತ್ಯಂತ ಸಮರ್ಥವಾಗಿ ಯಶಸ್ವಿಗೊಳಿಸಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಎನ್. ಎಚ್. ಕೋನರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಜವಾಹರ ಬಾಲ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಆಯೋಜಿಸಿದ್ದ ಮಕ್ಕಳ ದಿನಾಚರಣೆ-2024 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇದೊಂದು ಬಹಳ ಪ್ರಮುಖವಾದಂತಹ ಖಾತೆ. ಅತಿ ಹೆಚ್ಚು ಬಜೆಟ್ ಕೊಟ್ಟಿರುವ ಖಾತೆಯೂ ಇದಾಗಿದೆ. ನಾವೆಲ್ಲರೂ ಈ ಸಚಿವರು ಹೇಳಿದಂತೆಯೇ ಕೇಳಬೇಕು; ಇದು ಅನಿವಾರ್ಯ ಕೂಡ. ಅತಿ ಹೆಚ್ಚು ದುಡ್ಡು ಕೊಡುವುದಕ್ಕೆ ಲಕ್ಷ್ಮೀಯೇ ಇವರಾಗಿದ್ದಾರೆ. ಸಚಿವರ ಹೆಸರಲ್ಲೇ ಲಕ್ಷ್ಮೀ ಇದೆ. ಸಚಿವರಾಗಿ ಸಹೋದರಿ ಲಕ್ಷ್ಮೀ ಹೆಬ್ಭಾಳಕರ್ ಅವರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
*ಸಿಎಂ, ಡಿಸಿಎಂ ಜೋಡೆತ್ತು*
ರಾಜ್ಯದ ಒಳಿತಿಗಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ಜೋಡೆತ್ತುಗಳಾಗಿ ದುಡಿಯುತ್ತಿದ್ದಾರೆ. ಮೊನ್ನೆ ನಡೆದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಳೂ ಜಯಗಳಿಸುವ ಮೂಲಕ ರಾಜ್ಯದ ಜನರಲ್ಲಿ ಮತ್ತಷ್ಟು ವಿಶ್ವಾಸ ಗಳಿಸಿದ್ದಾರೆ. ಬಡವರಿಗಾಗಿ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ. ಗೃಹಲಕ್ಷ್ಮಿ ಮೂಲಕ ಬಡ ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುತ್ತಿದ್ದಾರೆ. ಉಚಿತವಾಗಿ ಬಸ್, ಕರೆಂಟ್ ನೀಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳೆಂದರೆ ದೊಡ್ಡ ಆಸ್ತಿ; ಮಕ್ಕಳ ಮನಸ್ಸಿನಲ್ಲಿ ಸ್ವಲ್ಪವೂ ದ್ವೇಷ, ಅಸೂಯೆ, ಕಪಟತನ ಯಾವುದೂ ಇರುವುದಿಲ್ಲ. ಆ ಮುಗ್ಧತೆಯನ್ನು ನೋಡುವುದೇ ಒಂದು ಚೆಂದ. ಬೆಂಗಳೂರಿನವರು ಬೇರೆ ಜಗತ್ತೇ ನೋಡುವುದಿಲ್ಲ. ಮೊಬೈಲ್, ಟಿವಿ ಅಷ್ಟೇ. ನಅಪಾರ್ಟ್ ಮೆಂಟ್ ಗಳನ್ನು ಬಿಟ್ಟು ಕೆಳಗೆ ಇಳಿಯುವುದಿಲ್ಲ. ಆದರೆ, ಹೊರಗೆ ಬಂದು ಇಂತಹ ಮಕ್ಕಳ ಕಾರ್ಯಕ್ರಮಗಳನ್ನು ನೋಡುವುದೇ ಒಂದು ರೀತಿ ಸಂಭ್ರಮ. ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವ ಸಚಿವರಿಗೆ ಧನ್ಯವಾದ ಹೇಳಬೇಕಾಗಿದೆ ಎಂದು ಕೋನರೆಡ್ಡಿ ಹೇಳಿದರು.
*ಮಕ್ಕಳು ದೇಶದ ಆಸ್ತಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಮಿತಿ ಸದಸ್ಯರು ಹಾಗೂ ಶಾಸಕರಾದ ಕೊತ್ತನೂರು ಮಂಜುನಾಥ್ ಮಾತನಾಡಿ, ಮಕ್ಕಳು ದೇಶದ ಆಸ್ತಿ. ನಾಳಿನ ಭಾರತವನ್ನು ಇಂದಿನ ಮಕ್ಕಳು ರೂಪಿಸಬೇಕಿದೆ. ನಾವು ಇಂದು ಯಾವ ರೀತಿ ಅವರನ್ನು ಮುಂದೆ ತರುತ್ತೇವೋ ಅದೇ ರೀತಿ ನಾಳಿನ ಭಾರತದ ಭವಿಷ್ಯ ರೂಪುಗೊಳ್ಳುತ್ತದೆ. ಅಂಗನವಾಡಿ ಕೇಂದ್ರಗಳು ಸರ್ಕಾರಿ ಮಾಂಟೆಸ್ಸರಿಗಳಾಗಿ ಪರಿವರ್ತನೆ ಆಗುತ್ತಿರುವುದು ಒಳ್ಳೆಯ ಬೆಳೆವಣಿಗೆ. ಕೋಲಾರ ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳು ಸೇರಿದಂತೆ ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡಿರುವುದಾಗಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಮಿತಿ ಸದಸ್ಯರು ಹಾಗೂ ಶಾಸಕರಾದ ಮಂಜುಳಾ ಅರವಿಂದ ಲಿಂಬಾವಳಿ ಮಾತನಾಡಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿ ಲಕ್ಷ್ಮೀ ಹೆಬ್ಬಾಳಕರ್ ಅವರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಮಕ್ಕಳ ಮತ್ತು ಮಹಿಳೆಯರಿಗಾಗಿ ಮತ್ತಷ್ಟು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಚಿವರಲ್ಲಿ ಅವರು ಮನವಿ ಮಾಡಿದರು.
*ಮಕ್ಕಳಲ್ಲಿ ಸಾಮರಸ್ಯ ಬೆಳೆಸೋಣ: ಶಾಸಕರಾದ ರಿಜ್ವಾನ್ ಹರ್ಷದ್ ಮಾತನಾಡಿ, ಮಕ್ಕಳು ಎಂದರೆ ದೇಶದ ಭವಿಷ್ಯ. ಮಕ್ಕಳಿಗೆ ಯಾವ ಮೌಲ್ಯಗಳನ್ನು ಅಳವಡಿಸುತ್ತೇವೆ ಎನ್ನುವುದು ಬಹಳ ಮುಖ್ಯ. ಇಂದಿನ ಸಮಾಜದಲ್ಲಿ ನಡೆಯುತ್ತಿರುವ ವಿಷಯಗಳ ಬಗ್ಗೆ ಗಮನಹರಿಸಿದರೆ ನಾವು ಮಕ್ಕಳಿಗೆ ಒಳ್ಳೆಯ ಸಮಾಜವನ್ನು ಬಿಟ್ಟುಕೊಡುತ್ತಿದ್ದೇವೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಮಕ್ಕಳಿಗೆ ಪ್ರೀತಿ, ವಿಶ್ವಾಸ ತುಂಬಬೇಕು. ಇದು ಸಾಧ್ಯವಾಗದಿದ್ದರೆ ಮುಂದೆ ದೊಡ್ಡ ಅನಾಹುತವೇ ಆಗಬಹುದು ಎಂದು ಅವರು ಎಚ್ಚರಿಸಿದರು.
ಇತ್ತೀಚೆಗೆ ಪ್ರತಿನಿತ್ಯ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ನೋಡಿದರೆ, ಬರೀ ಜಾತಿ, ಧರ್ಮ, ಕೋಮು ಈ ವಿಷಯಗಳೇ ಹೆಚ್ಚು ಚರ್ಚಿತವಾಗುತ್ತಿವೆ. ಇವು ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರಬಲ್ಲವು ಎನ್ನುವುದನ್ನು ಪ್ರತಿಯೊಬ್ಬ ಪೋಷಕರು ಮನಗಾಣಬೇಕು. ಭಾರತದ ಹೆಸರು ಇಡೀ ಪ್ರಪಂಚದಲ್ಲೇ ಬಲಿಷ್ಠವಾಗಿ ಮಾಡಬೇಕಾದರೆ ಮಕ್ಕಳಲ್ಲಿ ಸಾಮರಸ್ಯದ ಭಾವನೆಗಳನ್ನು ಹುದುಗಿಸಬೇಕಿದೆ ಎಂದು ಹೇಳಿದರು.
*ಪರಿಣಾಮಕಾರಿ ಕಾರ್ಯಕ್ರಮಗಳು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಪದ್ಮಾವತಿ, ಬಾಲಭವನದ ಅಧ್ಯಕ್ಷರಾದ ಬಿ. ಆರ್. ನಾಯ್ಡು, ಧಾರವಾಡ ಭಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಮಾತನಾಡಿ, ಮಕ್ಕಳ ವಿಕಸನಕ್ಕೆ ಬೇಕಾದ ಕಾರ್ಯಕ್ರಮಗಳನ್ನು ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ. ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಉದಯ್ ಬಿ ಗರುಡಚಾರ್, ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರಾದ ನಾಗನಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಶಾಮ್ಲಾ ಇಕ್ಬಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಾದ ಸಿದ್ದೇಶ್ವರ, ಜಂಟಿ ನಿರ್ದೇಶಕರಾದ ಬಿ.ಎಚ್. ನಿಶ್ಚಲ್ ಮತ್ತಿತರರು ಉಪಸ್ಥಿತರಿದ್ದರು.