ಮಹಿಳೆಯರಿಗೆ, ಇಲಾಖೆಗೆ ಶಕ್ತಿ ತುಂಬುವುದೇ ನನ್ನ ಗುರಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Ravi Talawar
ಮಹಿಳೆಯರಿಗೆ, ಇಲಾಖೆಗೆ ಶಕ್ತಿ ತುಂಬುವುದೇ ನನ್ನ ಗುರಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now
ಐಸಿಡಿಎಸ್ ಸುವರ್ಣ ಮಹೋತ್ಸವ ಕಾರ್ಯಕ್ರಮಗಳ ಕುರಿತು ರಾಜ್ಯಮಟ್ಟದ ಪೂರ್ವಭಾವಿ ಸಭೆ ನಡೆಸಿದ ಸಚಿವರು
ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಕೈಜೋಡಿಸಲು ಕರೆ
ಬೆಂಗಳೂರು: ಕರ್ನಾಟಕದ ಮಹಿಳೆಯರಿಗೆ, ನಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಶಕ್ತಿ ತುಂಬುವುದೇ ನನ್ನ ಗುರಿ. ಮುಂದಿನ ದಿನಗಳಲ್ಲಿ ನಮ್ಮ ಇಲಾಖೆಯನ್ನು ನಂಬರ್ ಒನ್ ಮಾಡುವುದೇ ನನ್ನ ಕನಸಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನವೆಂಬರ್ 19 ರಂದು ನಡೆಯಲಿರುವ ಐ.ಸಿ.ಡಿ.ಎಸ್ ಯೋಜನೆಯ ಅಂಗನವಾಡಿ ಸುವರ್ಣ ಮಹೋತ್ಸವ, ಅಕ್ಕಾ ಪಡೆ ಲೋಕಾರ್ಪಣೆ, ಗೃಹಲಕ್ಷ್ಮಿ ಬ್ಯಾಂಕ್ ಉದ್ಘಾಟನೆ ಕುರಿತು  ಡಾ.ಬಾಬು ಜಗಜೀವನರಾಮ್ ಆಡಿಟೋರಿಯಂ ಮತ್ತು ತರಬೇತಿ ಕೇಂದ್ರದಲ್ಲಿ ಬುಧವಾರ ರಾಜ್ಯಮಟ್ಟದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಸಚಿವರು, ಕಾರ್ಯಕ್ರಮದ ಯಶಸ್ಸಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಐಸಿಡಿಎಸ್ ಕಾರ್ಯಕ್ರಮಗಳ ಬಗ್ಗೆ ಸಲಹೆ, ಸಹಕಾರ ಕೋರಿ ಈ ಸಭೆ ಕರೆಯಲಾಗಿದ್ದು, ಅಂದಿನ ಕಾರ್ಯಕ್ರಮಕ್ಕೆ ಸುಮಾರು 40 ಸಾವಿರಕ್ಕೂ ಅಧಿಕ ಮಹಿಳೆಯರು ಆಗಮಿಸುವ ನಿರೀಕ್ಷೆ ಇದೆ. ಯಾವುದೇ ಲೋಪ ಆಗದಂತೆ ಎಚ್ಚರ ವಹಿಸಬೇಕು ಎಂದು ಕರೆ ನೀಡಿದರು.
* *ಗೃಹಲಕ್ಷ್ಮಿ ಯೋಜನೆ ಮಾದರಿಯಲ್ಲೇ ಬ್ಯಾಂಕ್ ಜನಮನ್ನಣೆ ಗಳಿಸಲಿ*
ವಿಶ್ವದಲ್ಲೇ ದೊಡ್ಡದಾದ ಗೃಹ ಲಕ್ಷ್ಮೀ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಗೃಹಲಕ್ಷ್ಮಿ ಫಲಾನುಭವಿಗಳಿಗೆ ಲಾಭ ತಂದುಕೊಡುವ ಸಲುವಾಗಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘವನ್ನು ಆರಂಭಿಸಲಾಗುತ್ತಿದೆ. 2000 ಜನ ಫಲಾನುಭವಿಗಳ ಹಣ ಸಂಗ್ರಹಿಸಲಾಗಿದ್ದು, ಇದು ಬಹಳ ದೊಡ್ಡ ಜವಾಬ್ದಾರಿಯಾಗಿದೆ. ಗೃಹಲಕ್ಷ್ಮಿ ಯೋಜನೆಯ ಮಾದರಿಯಲ್ಲೆ ಗೃಹಲಕ್ಷ್ಮಿ ಬ್ಯಾಂಕ್ ಕೂಡ ಜನಮನ್ನಣೆ ಗಳಿಸಲು ಅಧಿಕಾರಿಗಳು ಶ್ರಮ ಹಾಕಬೇಕು. ಮೂರು ತಿಂಗಳಲ್ಲಿ ಜಿಲ್ಲಾ ಮಟ್ಟಕ್ಕೂ ಗೃಹಲಕ್ಷ್ಮಿ ಸೊಸೈಟಿಯನ್ನು ವಿಸ್ತರಣೆ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಗೃಹಲಕ್ಷ್ಮಿ ಸೊಸೈಟಿ ಮೂಲಕ ಮೂರು  ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಫಲಾನುಭವಿಗಳಿಗೆ ಲೋನ್ ನೀಡಲಾಗುವುದು. ಸೊಸೈಟಿ ಯಶಸ್ಸಿಗೆ ಎಲ್ಲರ ಸಹಕಾರ, ಜವಾಬ್ದಾರಿ ಇರಬೇಕು. ನಾವು ಯಾರಿಂದಲೂ ಹಣ ಪಡೆಯುವುದಿಲ್ಲ, ಫಲಾನುಭವಿಗಳಿಂದ ಫೋನ್ ಪೇ ಮೂಲಕ ಹಣ ಸಂಗ್ರಹಿಸಲಾಗುವುದು. ಗೃಹಲಕ್ಷ್ಮಿ ಯಶಸ್ಸಿಗೆ ಯಾವ ರೀತಿ ಎಲ್ಲರೂ ಶ್ರಮ ವಹಿಸಿದ್ದೀರೋ ಹಾಗೆಯೇ ಗೃಹಲಕ್ಷ್ಮಿ ಸೊಸೈಟಿಯ ಯಶಸ್ಸಿಗೂ ಹೆಚ್ಚಿನ ನಿಗಾ ವಹಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.‌
* *ಅಕ್ಕಾ ಪಡೆ ಮಹಿಳೆಯರಿಗೆ ಧೈರ್ಯ ಹೆಚ್ಚಿಸಲಿದೆ*
ಮಹಿಳೆಯರಿಗೆ ಹೆಚ್ಚು ಸುರಕ್ಷತೆ ನೀಡುವ ಸಲುವಾಗಿ ಅಕ್ಕಾ‌ಪಡೆಯನ್ನು ರಾಜ್ಯಾದ್ಯಂತ ಆರಂಭಿಸಲಾಗುತ್ತಿದೆ. ಇದಕ್ಕೆ ಇಲಾಖೆಯ ಅಧಿಕಾರಿಗಳು ಪೊಲೀಸ್ ಇಲಾಖೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅಕ್ಕಾ ಪಡೆ ಮನೆ ಮಾತಾಗುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.
ಹೋಮ್ ಗಾರ್ಡ್ಸ, ಎನ್ ಸಿಸಿ ವಿದ್ಯಾರ್ಥಿಗಳು ಅಕ್ಕಾ ಪಡೆ ಯಲ್ಲಿ ಕಾರ್ಯನಿರ್ವಹಿಸಲಿದ್ದು, ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ಅಕ್ಕಾ ಪಡೆ  ಶಾಲಾ‌ ಕಾಲೇಜು, ಪಾರ್ಕ್, ಶಾಂಪಿಂಗ್ ಮಾಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು‌ ತಿರುಗಲಿದ್ದು, ಶಾಲಾ‌ ಕಾಲೇಜುಗಳಿಗೆ ಭೇಟಿ ನೀಡಿ ಸಹಾಯ ಮಾಡಲಿದೆ ಎಂದರು.‌
ಡೀಪ್ ಫೇಕ್ ಹಾವಳಿ ಜಾಸ್ತಿ ಆಗುತ್ತಿದ್ದು, ಇದಕ್ಕೆ ಹೆಣ್ಣು ಮಕ್ಕಳು, ಹಿರಿಯ ಮಹಿಳೆಯರೇ ಟಾರ್ಗೆಟ್ ಆಗುತ್ತಿದ್ದಾರೆ. ಇದನ್ನು ತಡೆಯೋಕೆ ಅಕ್ಕಾ ಪಡೆ ಕೆಲಸ ಮಾಡಲಿದೆ. ಜೊತೆಗೆ ಆರಂಭಗೊಂಡ ಮೂರು ತಿಂಗಳಲ್ಲಿ ಮನೆ ಮನೆಗೆ ತೆರಳಲಿದೆ, ಜನರಿಗೆ ಜಾಗೃತಿ ಮೂಡಿಸಲಿದೆ ಎಂದು ಹೇಳಿದರು.
* *ಎಲ್ ಕೆಜಿ, ಯುಕೆಜಿ ದಾಖಲಾತಿ  ಜಾಸ್ತಿ ಆಗಲಿ*
ಅಂಗನವಾಡಿ ಕೇಂದ್ರಗಳಲ್ಲಿ ಆರಂಭವಾಗುವ ಎಲ್ ಕೆಜಿ, ಯುಕೆಜಿ ತರಗತಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುವಂತೆ ಮಾಡಬೇಕು, ಇದಕ್ಕೆ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರ ನೆರವು ಅಗತ್ಯ ಎಂದರು.
ಇಂದಿರಾ ಗಾಂಧಿಯವರ ಹುಟ್ಟುಹಬ್ಬದ ದಿನದ ಪ್ರಯುಕ್ತ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಮೂರೂ ಕಾರ್ಯಕ್ರಮಗಳ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು  ಎಂದು ಸಚಿವರು ತಿಳಿಸಿದರು.
* *8 ಜಿಲ್ಲೆಗಳಿಂದ ಅಧಿಕ ಮಹಿಳೆಯರು ಭಾಗಿ*
ಬೆಂಗಳೂರಿಗೆ ಸಮೀಪದಲ್ಲಿ ಇರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ‌ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ತುಮಕೂರು, ‌ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಿಂದ ಹೆಚ್ಚು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಈ ಜಿಲ್ಲೆಗಳ ಉಪ ನಿರ್ದೇಶಕರು ಹೆಚ್ಚಿನ ನಿಗಾ ವಹಿಸುವಂತೆ ತಿಳಿಸಿದರು.
31 ಜಿಲ್ಲೆಗಳ ಉಪ ನಿರ್ದೇಶಕರು (ಡಿಡಿ), 31 ಜಿಲ್ಲಾ ನಿರೂಪಣಾಧಿಕಾರಿಗಳು (ಪಿಒ),  200ಕ್ಕೂ ಅಧಿಕ ಶಿಶು ಯೋಜನಾಭಿವೃದ್ಧಿ‌ ಅಧಿಕಾರಿಗಳು ‌(ಸಿಡಿಪಿಒ), ರಾಜ್ಯದ ಎಲ್ಲಾ ಮೇಲ್ವಿಚಾರಕರು ಸಭೆಯಲ್ಲಿ ಹಾಜರಿದ್ದರು. ‌
ಈ ವೇಳೆ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪದ್ಮಾವತಿ, ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾದ ಮಹೇಶ್ ಬಾಬು, ಉಪ ಕಾರ್ಯದರ್ಶಿ ಮುರಳೀಧರ್ ಎಸ್ ತಳ್ಳೀಕೆರಿ, ಸಚಿವರ ‌ಆಪ್ತ ಕಾರ್ಯದರ್ಶಿ ಡಾ.ಟಿ.ಎಚ್.ವಿಶ್ವನಾಥ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಜಂಟಿ‌ ನಿರ್ದೇಶಕರಾದ ಬಿ.ಎಚ್.ನಿಶ್ಚಲ್‌ ಸೇರಿದಂತೆ ಇಲಾಖೆಯ ಜಂಟಿ ನಿರ್ದೇಶಕರು, ವಿವಿಧ ಹಂತದ ಅಧಿಕಾರಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article