ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ನಮ್ಮ ಸರ್ಕಾರದ ಅವಧಿಯಲ್ಲಿ ಮೀಸಲಾತಿ ನಿಶ್ಚಿತವಾಗಿ ಸಿಗುವ ವಿಶ್ವಾಸವಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ದಲ್ಲಿ ಪಂಚಮಸಾಲಿ ಸಮುದಾಯದ ಮೀಸಲಾತಿ ವಿಚಾರವಾಗಿ ನಡೆದ ಸಭೆ ಬಳಿಕ ಮಾತನಾಡಿದ ಸಚಿವರು, ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಸಿಕ್ಕೇ ಸಿಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತಂತೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಕೂಲಂಕಷವಾಗಿ ಚರ್ಚೆ ನಡೆಸಲಾಗಿದೆ. ನಮ್ಮ ನಾಯಕರು ನಮ್ಮ ಸಮುದಾಯದ ಬಗ್ಗೆ ಸಕಾರಾತ್ಮಕ ಭಾವನೆ ಹೊಂದಿದ್ದಾರೆ ಎಂದು ಹೇಳಿದರು.
ಪಂಚಮಸಾಲಿ ಸಮುದಾಯದ ಮೀಸಲಾತಿ ಕುರಿತ ಸಭೆಗೆ ನೀತಿ ಸಂಹಿತೆ ಉಲ್ಲಂಘನೆ ಆಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಸಭೆಯಿಂದ ಯಾವುದೇ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಉಪ ಚುನಾವಣೆ ಘೋಷಣೆಗೂ ಮುನ್ನವೇ ಸಭೆಯ ದಿನಾಂಕ ನಿಗದಿಯಾಗಿತ್ತು. ಹೀಗಾಗಿ ಸಭೆಯನ್ನು ನಡೆಸಲಾಗಿದ್ದು, ಆದರೆ, ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದರು.
ನೀತಿ ಸಂಹಿತೆ ಬರುವುದಕ್ಕೂ ಮೊದಲೇ ಈ ಸಭೆ ನಿಗದಿಯಾಗಿತ್ತು. ಸ್ವಾಮೀಜಿಗಳ ಅಪ್ಪಣೆ ಮೇರೆಗೆ ಸಭೆ ನಿಗದಿಪಡಿಸಲಾಗಿತ್ತು. ಸಮಾಜದ ಬಾಂಧವರು ಹೋರಾಟಕ್ಕೆ ಸಿದ್ದರಿದ್ದಾರೆ. ಹೀಗಾಗಿ ತಪ್ಪು ಸಂದೇಶ ಹೋಗಬಾರದು ಎನ್ನುವ ದೃಷ್ಟಿಯಿಂದ ಸಭೆ ನಡೆಸಲಾಯಿತು ಎಂದು ಸಚಿವರು ಸ್ಪಷ್ಟಪಡಿಸಿದರು.
ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ನೀಡುವುದರಿಂದ ಬೇರೆ ಸಮುದಾಯಗಳಿಗೆ ಏನಾದರೂ ಸಮಸ್ಯೆ ಆಗಲಿದೆಯೇ ಎಂಬುದರ ಬಗ್ಗೆ ಚರ್ಚೆ ಆಗಿದ್ದು, ಮೊದಲಿನಿಂದಲೂ ಮೀಸಲಾತಿ ಹೋರಾಟದಲ್ಲಿ ನಾನು ಮುಂಚೂಣಿಯಲ್ಲಿರುವೆ ಎಂದು ಸಚಿವರು ಹೇಳಿದರು.
ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ವಿಜಯಾನಂದ ಕಾಶಪ್ಪನವರ್, ವಿನಯ್ ಕುಲಕರ್ಣಿ, ಬಾಬಾ ಸಾಹೇಬ್ ಪಾಟೀಲ್, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಸೇರಿದಂತೆ ಪಂಚಮಸಾಲಿ ಮುಖಂಡರು ಭಾಗಿಯಾಗಿದ್ದರು.