ಬೆಂಗಳೂರು : ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾವಿ-ಸವಣೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರು, ಉಪ ಮುಖ್ಯಮಂತ್ರಿಗಳು ಆದ ಡಿ.ಕೆ.ಶಿವಕುಮಾರ್ ಸಾರಥ್ಯದ ರಾಜ್ಯ ಸರ್ಕಾರಕ್ಕೆ ಸಿಕ್ಕ ಗೆಲುವು ಇದಾಗಿದೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಜನ ಮೆಚ್ಚಿದ್ದಾರೆ ಎಂದು ಈ ಫಲಿತಾಂಶ ತೋರುತ್ತದೆ ಎಂದು ಸಚಿವರು ಹೇಳಿದ್ದಾರೆ.
ಉಪಚುನಾವಣೆ ಫಲಿತಾಂಶದ ಮೂಲಕ ಮೂರು ಕ್ಷೇತ್ರಗಳ ಮತದಾರರು ವಿಪಕ್ಷಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಮೂರು ಕ್ಷೇತ್ರಗಳ ಮತದಾರರು ಅಭಿವೃದ್ಧಿ ಕಾರ್ಯಗಳಿಗೆ ಮತ ಹಾಕಿದ್ದು, ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದ್ದ ವಿರೋಧ ಪಕ್ಷಗಳಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದಿದ್ದಾರೆ.
*ಶಿಗ್ಗಾವಿ-ಸವಣೂರು ಕ್ಷೇತ್ರದಲ್ಲಿ ಸಚಿವರಿಂದ ಪ್ರಚಾರ*
ಶಿಗ್ಗಾವಿ-ಸವಣೂರು ವಿಧಾನಸಭಾ ಕ್ಷೇತ್ರದ ಕುಂದೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಚಾರ ಕೈಗೊಂಡಿದ್ದರು. ಐದು ದಿನಗಳ ಕಾಲ ಪ್ರಚಾರ ನಡೆಸಿದ ಸಚಿವರು, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ, ಅಭಿವೃದ್ಧಿ ಯೋಜನೆಗಳ ಬಗ್ಗೆ ತಮ್ಮ ಭಾಷಣದ ಮೂಲಕ ಜನರಿಗೆ ತಿಳಿಹೇಳಿದ್ದರು.
ಉಪ ಚುನಾವಣಾ ಫಲಿತಾಂಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕೈ ಮತ್ತಷ್ಟು ಬಲಗೊಂಡಿದ್ದು, ಈ ಫಲಿತಾಂಶದಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತಷ್ಟು ಬಲಗೊಂಡಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.