ಸರ್ಕಾರದ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಲಿಂಗಾಯತ  ಮಠಗಳೇ ಪ್ರೇರಣೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Ravi Talawar
ಸರ್ಕಾರದ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಲಿಂಗಾಯತ  ಮಠಗಳೇ ಪ್ರೇರಣೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now
ಬೆಳಗಾವಿ: ಸರ್ಕಾರದ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಲಿಂಗಾಯತ  ಮಠಗಳೇ ಪ್ರೇರಣೆಯಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಕಾರಂಜಿ ಮಠದ ಪೀಠಾಧಿಪತಿಗಳಾದ ಶ್ರೀ ಗುರುಸಿದ್ಧ ಸ್ವಾಮಿಗಳ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅನುಭಾವ ಕಾರಂಜಿ ಪುಸ್ತಕ ಬಿಡುಗಡೆ ಗೊಳಿಸಿ ಮಾತನಾಡಿದ ಸಚಿವರು, ವೀರಶೈವ ಲಿಂಗಾಯತ ಮಠಗಳು ಯಾವುದೇ ಸರ್ಕಾರಗಳಿಗೆ  ಪರ್ಯಾಯವಾಗಿ ಎನ್ನುವಂತೆ ಕೆಲಸ ಮಾಡುತ್ತಿವೆ ಎಂದರು.
ಸರ್ಕಾರದ ಪ್ರಮುಖ ಯೋಜನೆಯಾದ, 52 ಸಾವಿರ ಕೋಟಿ ರೂಪಾಯಿ ಗೃಹಲಕ್ಷ್ಮೀ ಯೋಜನೆಯನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸುತ್ತಿರುವೆ ಎಂದು ಸಚಿವರು ಹೇಳಿದರು.
ಮಠಗಳು ಸರ್ಕಾರಕ್ಕೆ ಮಾರ್ಗದರ್ಶನ ಮಾಡುತ್ತಿವೆ.‌ ಮಠಗಳ ಕಾಯಕ ದಾಸೋಹ, ಅನ್ನ ದಾಸೋಹ, ಜ್ಞಾನ ದಾಸೋಹ, ಶಿಕ್ಷಣ ‌ದಾಸೋಹ ಇವುಗಳ ಮೂಲಕ ಸಮಾಜಕ್ಕೆ ಭಾರಿ‌ದೊಡ್ಡ ಕೊಡುಗೆ ನೀಡುತ್ತಾ ಬಂದಿವೆ. ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ರೂಪಿಸಲು ಲಿಂಗಾಯತ ಮಠಗಳ ಪಾತ್ರ ದೊಡ್ಡದು. ಬೆಳಗಾವಿ ಬಹಳ ಪುಣ್ಯವಂತರು, ಹಲವಾರು ಮಠಗಳ ಮಾರ್ಗದರ್ಶನ ಸಿಗುತ್ತಿದೆ ಎಂದು ತಿಳಿಸಿದರು.
ನಾನು ಸಮಾಜದ ಮಗಳಾಗಿ ಸಮಾಜಕ್ಕೆ ಒಳ್ಳೆ ಹೆಸರು ತರುವಲ್ಲಿ ಎಲ್ಲರ ಸಹಕಾರದೊಂದಿಗೆ ಕೆಲಸ ಮಾಡುತ್ತಿದ್ದೇನೆ. ಎಲ್ಲಾ ಜಾತಿ ಯವರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೇನೆ. ಕಾರಂಜಿ ಮಠದ ಗುರುಸಿದ್ದ ಸ್ವಾಮಿಗಳು 20 ವರ್ಷಗಳ ಹಿಂದೆಯೇ ಒಳ್ಳೆ ಸಮಾಜ ಸೇವಕಿಯಾಗು ಎಂದ ಆಶೀರ್ವಾದ ಮಾಡಿದ್ದರು ಎಂದು ಸಚಿವರು ಸ್ಮರಿಸಿದರು.
ಅವರ ಹಾಗೂ ಎಲ್ಲ ಮಠಾಧೀಶರ ಮಾರ್ಗದರ್ಶನದಲ್ಲಿ ಇಂದು ಮುನ್ನಡೆಯುತ್ತಿದ್ದೇನೆ. ಗುರುಸಿದ್ಧ ಸ್ವಾಮೀಜಿಯವರು ಪ್ರಚಾರ ಪ್ರಿಯರಲ್ಲ. ಕೆಲಸವನ್ನು ಮಾಡಿ ದೇವರ ಪಾದಕ್ಕೆ ಅರ್ಪಿಸುವುದು ಗೊತ್ತು. ಸಮಾಜ ಸುಧಾರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಮಾರ್ಗದರ್ಶಕರಾಗಿ ಕೆಲಸ‌ಮಾಡುತ್ತಿದ್ದಾರೆ. ಅವರ 50 ಹಾಗೂ ಷಷ್ಟ್ಯಬ್ದಿ ವರ್ಷಗಳ ಕಾರ್ಯಕ್ರಮಗಳನ್ನು ಮಾಡಬೇಕು ಎಂದರೂ ಸ್ವಾಮೀಜಿಗಳು ಕೇಳಿರಲಿಲ್ಲ. ಇದೀಗ ಭಕ್ತರೆಲ್ಲಾ ಸೇರಿ ಅವರನ್ನು ಕೇಳದೆಯೇ, ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಡಂಬಳ-ಗದಗಿನ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ  ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಧಾರವಾಡ ಮುರುಘಾಮಠದ  ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಹುಕ್ಕೇರಿಯ ಗುರುಶಾಂತೇಶ್ವರ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ನಿಲಜಿಯ ಅಲೌಕಿಕ ಜ್ಞಾನಮಂದಿರದ ಶ್ರೀ ಶಿವಾನಂದ ಗುರೂಜಿ, ಬೆಳಗಾವಿ ಕಾರಂಜಿಮಠ ಉತ್ತರಾಧಿಕಾರಿಗಳಾದ ಡಾ.ಶಿವಯೋಗಿ ದೇವರು, ಬೆಳಗಾವಿ ರೇಣುಕಾಶ್ರಮದ ಪೂಜ್ಯಶ್ರೀ ಗಂಗಾಮಾತಾಜಿ, ನಾಗನೂರು ಶ್ರೀ ರುದ್ರಾಕ್ಷಿಮಠದ ಪೂಜ್ಯ ಶ್ರೀ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು, ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಸಂಸದರಾದ ಜಗದೀಶ್ ಶೆಟ್ಟರ್, ಮಾಜಿ ಶಾಸಕರಾದ ಫಿರೋಜ್ ಸೇಠ್,  ಅಮೃತ ಮಹೋತ್ಸವ ಸಮಿತಿಯ ಸದಸ್ಯರಾದ ಡಾ. ಬಸವರಾಜ ಬಾಗೋಜಿ, ಸೋಮಶೇಖರ ಹಿರೇಮಠ, ಬಸವರಾಜ ಹಳಂಗಳಿ, ಸತೀಶ ಮಾಳವದೆ, ವಿಜಯ ಜಾಧವ್, ಡಾ.ಬಸವರಾಜ ಜಗಜಂಪಿ ಸೇರಿೆ ಕಾರಂಜಿಮಠದ ಪದಾಧಿಕಾರಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article