ಬಳ್ಳಾರಿ, ಜುಲೈ 07: ನಗರದ ಸ್ತ್ರೀ ಸೇವಾ ನಿಕೇತನ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಳೆಯ ಉಪನಿರ್ದೇಶಕರ ಕಚೇರಿಯ ಆವರಣದಲ್ಲಿ ಖಾಲಿ ಇರುವ 12 ಎಕರೆ ವಿಸ್ತೀರ್ಣದ ಜಾಗದಲ್ಲಿ ನೂತನ ಬಾಲ ಭವನ ನಿರ್ಮಾಣ ಸಂಬಂಧ ಶನಿವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಥಳ ಪರಿಶೀಲನೆ ನಡೆಸಿದರು.
ಇದೇ ಜಾಗದಲ್ಲಿ ಬಾಲ ಭವನದ ಜೊತೆಗೆ ವಾಣಿಜ್ಯ ಮಳಿಗೆಗಳು, ಮಹಿಳೆಯರಿಗಾಗಿ ಟೆನ್ನಿಸ್ ಕೋರ್ಟ್, ಈಜುಕೊಳ ನಿರ್ಮಾಣ ಮಾಡಬೇಕೆಂದು ಸ್ಥಳದಲ್ಲಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಬಾಲ ಭವನ ಮತ್ತಿತರ ಕಟ್ಟಡ ನಿರ್ಮಾಣ ನಿರ್ಮಾಣಕ್ಕಾಗಿ ಮಿಷನ್ ಶಕ್ತಿ ಯೋಜನೆಯಡಿ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸಚಿವರೊಂದಿಗೆ ಶಾಸಕ ನಾರಾ ಭರತರೆಡ್ಡಿ, ಬುಡಾ ಅಧ್ಯಕ್ಷ ಜೆ ಸಿ ಆಂಜನೇಯಲು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕ ಬಿ.ಎಚ್. ನಿಶ್ಚಲ್, ಬಳ್ಳಾರಿ ಜಿಲ್ಲಾ ಉಪನಿರ್ದೇಶಕ ವಿಜಯ್ಕುಮಾರ್ ಮತ್ತಿತರರು ಹಾಜರಿದ್ದರು.