ಮಂಡ್ಯ, ಆಗಸ್ಟ್ 06: ಶ್ರಾವಣ ಮಾಸದ ಮೊದಲ ಮಂಗಳವಾರದಂದು ಕರ್ನಾಟಕ ಸರ್ಕಾರ ಗೃಹಲಕ್ಷ್ಮಿಯರಿಗೆ ಸಿಹಿ ಸುದ್ದಿ ನೀಡಿದೆ. ಮನೆಯ ಯಜಮಾನಿ ಖಾತೆಗೆ ಲಕ್ಷ್ಮಿ (ಹಣ) ಬರಲಿದ್ದಾಳೆ. ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಖಾತೆಗೆ ಇಂದಿನಿಂದ (ಆ.06) ಹಣ ಜಮಾವಣೆ ಆಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಂತ್ರಿಕ ಕಾರಣದಿಂದ ಜೂನ್ ಮತ್ತು ಜುಲೈ ಎರಡು ತಿಂಗಳ ಹಣ ಜಮೆ ಆಗಿರಲಿಲ್ಲ. ಇವತ್ತಿನಿಂದ ಜೂನ್, ಜುಲೈ ತಿಂಗಳ ಹಣ ಖಾತೆಗೆ ಜಮೆ ಆಗಲಿದೆ ಎಂದು ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಮಹಿಳಾ ಸಬಲೀಕರಣ ಭಾಗವಾಗಿ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಸರ್ಕಾರ ಮನೆಯ ಯಜಮಾನಿ ಖಾತೆಗೆ 2 ಸಾವಿರ ರೂ. ಜಮೆ ಮಾಡುತ್ತದೆ. ಕಳೆದ 10 ತಿಂಗಳಿಂದ ಹಣ ಜಮೆಯಾಗಿತ್ತು. ಆದರೆ ಜೂನ್ ಮತ್ತು ಜುಲೈನ ಹಣ ಜಮಾವಣೆಗೊಂಡಿಲ್ಲ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸಂದರ್ಭದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಹಣವನ್ನು ಒಮ್ಮೆಲೆ ಪಾವತಿ ಮಾಡಲಾಗಿತ್ತು. ಆದರೆ, ತಾಂತ್ರಿಕ ಕಾರಣಾಂತರಗಳಿಂದ ಜೂನ್ ಮತ್ತು ಜುಲೈ ತಿಂಗಳ ಹಣ ಪಾವತಿ ಬಾಕಿ ಉಳಿದಿತ್ತು. ಈ ಹಣ ಇಂದು ಜಮಾವಣೆಯಾಗಲಿದೆ. ಗೃಹಲಕ್ಷ್ಮಿ ಹಣ ನೇರ ಲಾಭ ವರ್ಗಾವಣೆ (DBT) ಮೂಲಕ ಮನೆಯ ಯಜಮಾನಿ ಖಾತೆಗೆ ತಲಪುತ್ತದೆ. ಈಗಾಗಲೆ 10 ತಿಂಗಳ ಹಣ ನೀಡಲಾಗಿದೆ. ಒಟ್ಟು 20 ಸಾವಿರ ರೂ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಇದೀಗ ಎರಡು ತಿಂಗಳ ಹಣ ಅಂದರೆ ಒಟ್ಟು 4 ಸಾವಿರ ರೂ. ಅನ್ನು ಫಲಾನುಭವಿಗಳ ಕೈ ಸೇರಲಿದೆ.
ಜೂನ್ ಮತ್ತು ಜುಲೈ ತಿಂಗಳ ಹಣ ಜಮೆಯಾಗದಿದ್ದಕ್ಕೆ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಮಹಿಳೆಯರು ಇನ್ಮುಂದೆ ನಮಗೆ ಹಣ ಬರತ್ತೋ ಇಲ್ವೋ ಅಂತ ಚಿಂತಿತರಾಗಿದ್ದರು. ಆದರೆ ಇದೀಗ, ಈ ಚಿಂತೆ ದೂರವಾದಂತಾಗಿದೆ.