ಬೆಳಗಾವಿ:ಇತ್ತೀಚೆಗೆ ಸಂಭವಿಸಿದ ನಾವಗೆ ಕಾರ್ಖಾನೆಯ ಬೆಂಕಿ ಅವಘಡದಲ್ಲಿ ಮೃತಪಟ್ಟ ಮಾರ್ಕಂಡೇಯ ನಗರದ ಯುವಕ ಯಲ್ಲಪ್ಪ ಗುಂಡ್ಯಾಗೋಳ ಕುಟುಂಬಸ್ಥರಿಗೆ ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಾಂತ್ವನ ಹೇಳಿದರು.
ಮೃತ ಯುವಕನ ಮನೆಗೆ ಭೇಟಿ ನೀಡಿದ ಸಚಿವರು, ತಂದೆ, ತಾಯಿಯನ್ನು ಸಂತೈಸಿ, ಧೈರ್ಯ ತುಂಬಿದರು. ಇಂಥ ಘಟನೆ ನಡೆದಿರುವುದು ದುರದೃಷ್ಟಕರ, ಈ ಘಟನೆ ನಡೆಯಬಾರದಿತ್ತು. ಮೃತ ಯಲ್ಲಪ್ಪ ಕ್ರಿಯಾಶೀಲ ವ್ಯಕ್ತಿಯಾಗಿದ್ದ, ಯುವಕನ ಕುಟುಂಬದೊಂದಿಗೆ ನಮ್ಮ ಕುಟುಂಬ ಸದಾ ಜೊತೆಗಿರುತ್ತದೆ ಎಂದು ಸಚಿವರು ಹೇಳಿದರು.
ಮೃತ ಯಲ್ಲಪ್ಪ ಅವರ ತಾಯಿಯ ರೋಧನೆಯನ್ನು ಕಂಡು ಕಣ್ಣೀರು ಹಾಕಿದ ಸಚಿವರು, ಅವರಿಗೆ ಸ್ವತಃ ಊಟ ತಿನ್ನಿಸುವ ಮೂಲಕ ಸಾಂತ್ವನ ಹೇಳಿದರು. ಸಾವು-ನೋವು ಎಲ್ಲವೂ ದೇವರ ಇಚ್ಛೆ, ಇದನ್ನ ತಡೀಯೋಕೆ ಯಾರಿಂದಲೂ ಸಾಧ್ಯವಿಲ್ಲ. ದೈನಂದಿನ ಕಾರ್ಯಗಳಲ್ಲಿ ತೊಡಗಿ ಎಂದು ಧೈರ್ಯ ತುಂಬಿದರು.
ನೀವು ಯಾವುದೇ ಕಾರಣದಿಂದ ಧೈರ್ಯ ಕಳೆದುಕೊಳ್ಳಬಾರದು. ಹೆಣ್ಣು ಮಕ್ಕಳಿಗೆ ಉತ್ತಮ ಭವಿಷ್ಯ ನೀಡಿ. ಅವರನ್ನು ಚೆನ್ನಾಗಿ ಬೆಳೆಸಿ ಎಂದು ಸಚಿವರು ತಂದೆ -ತಾಯಿಯರಲ್ಲಿ ವಿನಂತಿಸಿದರು. ಈ ವೇಳೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.