* *ಮೈಚಳಿ ಬಿಟ್ಟು ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚನೆ*
*ಬೆಂಗಳೂರು:* ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುತ್ತಿರುವ ಪೂರಕ ಪೌಷ್ಠಿಕ ಆಹಾರದ ಗುಣಮಟ್ಟದ ನಿಗಾವಹಿಸಬೇಕು; ನಿರ್ಲಕ್ಷ್ಯ ವಹಿಸಿದರೆ ಆಯಾಯ ಉಪನಿರ್ದೇಶಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಬಾಲಭವನದಲ್ಲಿ ಶುಕ್ರವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲಾ ಜಿಲ್ಲಾ ಉಪ ನಿರ್ದೇಶಕರು (ಡಿಡಿ), ಜಿಲ್ಲಾ ನಿರೂಪಣಾಧಿಕಾರಿಗಳು(ಪಿಒ) ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳೊಂದಿಗೆ (ಸಿಡಿಪಿಒ) ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಇಲಾಖೆಯ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಅಂಗನವಾಡಿಗಳಿಗೆ ಪೂರೈಕೆ ಮಾಡುತ್ತಿರುವ ಆಹಾರ ಕಳಪೆ ಗುಣಮಟ್ಟದ್ದಾಗಿದ್ದರೆ ಕೂಡಲೇ ಪರಿಶೀಲಿಸಿ, ವಾಪಸ್ ಕಳುಹಿಸಲು ಹಿಂದೇಟು ಹಾಕಬಾರದು. ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ ಆಗಬೇಕೆನ್ನುವುದು ಎಲ್ಲರ ಆಶಯ. ಹಾಗಾಗಿ, ಈ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.
ಪೋಷಣ್ ಟ್ರ್ಯಾಕರ್ ಕುರಿತು ಜಿಲ್ಲಾವಾರು ಮಾಹಿತಿ ಪಡೆದ ಸಚಿವರು, ಇಲಾಖೆಯ ಕಾರ್ಯಕ್ರಮ, ಯೋಜನೆಗಳನ್ನು ಸೂಕ್ತ ರೀತಿಯಲ್ಲಿ ಜಾರಿ ಮಾಡದ ಉಪ ನಿರ್ದೇಶಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಪೋಷಣ್ ಟ್ರ್ಯಾಕರ್ ಗೆ ಸಂಬಂಧಿಸಿದಂತೆ ಉಪನಿರ್ದೇಶಕರು, ಪ್ರತಿದಿನ ಸಿಡಿಪಿಒಗಳ ಸಭೆ ನಡೆಸಿ, ಪ್ರಗತಿ ಪರಿಶೀಲಿಸುವಂತೆ ಸೂಚನೆ ನೀಡಿದರು.
ತೀವ್ರ ಅಪೌಷ್ಟಿಕತೆ (SAM), ಮಧ್ಯಮ ತೀವ್ರ ಅಪೌಷ್ಟಿಕತೆ (MAM), ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕು ಎಂದ ಅವರು, ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ನೇಮಕಾತಿ ಪ್ರತಿಕ್ರಿಯೆ ಬಗ್ಗೆ ಜಿಲ್ಲಾವಾರು ಮಾಹಿತಿ ಸಂಗ್ರಹಿಸಿದರು.
ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕಾಗಿ ಮಂಜೂರಾದ ಅಂಗನವಾಡಿ ಕಾಮಗಾರಿಗಳ ವಿವರ ಪಡೆದು, ಕಾಮಗಾರಿ ಪೂರ್ಣಗೊಂಡ ಕಟ್ಟಡಗಳು, ಪ್ರಗತಿಯಲ್ಲಿರುವ ಕಟ್ಟಡಗಳ ಬಗ್ಗೆ ಮಾಹಿತಿ ಪಡೆದರು. ಜೊತೆಗೆ ಕಟ್ಟಡಗಳಿಗೆ ಮಂಜೂರಾಗಿರುವ ಅನುದಾನ ಹಂಚಿಕೆಯ ಬಗ್ಗೆ ಮಾಹಿತಿ ಪಡೆದರು.
* *ಬೀದರ್ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ ತನಿಖೆಗೆ ಆದೇಶ*
ಬೀದರ್ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ತನಿಖೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆದೇಶಿಸಿದರು.
ಸಭೆಯಲ್ಲಿ, ಇಲಾಖೆಯ ಸರ್ಕಾರದ ಕಾರ್ಯದರ್ಶಿ ಶಾಮ್ಲಾ ಇಕ್ಬಾಲ್, ಉಪ ಕಾರ್ಯದರ್ಶಿ ಬಲರಾಮ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್, ಇಲಾಖೆಯ ನಿರ್ದೇಶಕ ರಾಘವೇಂದ್ರ, ಜಂಟಿ ನಿರ್ದೇಶಕರಾದ ಪುಷ್ಪಾ ರಾಯ್ಕರ್, ಜಿ.ಎಂ ಪಾಲಿ ಉಪಸ್ಥಿತರಿದ್ದರು.