ಧರ್ಮದಿಂದ ರಾಜಕಾರಣ ಮಾಡುತ್ತಿರುವೆ, ಜಾತಿಯಿಂದಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Ravi Talawar
ಧರ್ಮದಿಂದ ರಾಜಕಾರಣ ಮಾಡುತ್ತಿರುವೆ, ಜಾತಿಯಿಂದಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now
ಬೆಳಗಾವಿ: ಭಾರತದಲ್ಲಿ ದೇವರೆಂದರೆ ಭಯ ಭಕ್ತಿ ಜಾಸ್ತಿ. ಈ ಕಾರಣದಿಂದಲೇ ನಮ್ಮ ದೇಶ ಸುಭದ್ರವಾಗಿದೆ. ನನಗೂ ಕೂಡ ದೇವರೆಂದರೆ ಅಪಾರ ಭಕ್ತಿ. ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ. ಎಲ್ಲಾ ಜಾತಿ ಧರ್ಮದವರನ್ನು ಸಮಾನವಾಗಿ ನೋಡುತ್ತಾ ಧರ್ಮದಿಂದ ರಾಜಕಾರಣ ಮಾಡುತ್ತಿದ್ದೇನೆ ಎಂದು ಮಹಿಳಾ  ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಹೊನ್ನಿಹಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ವಿಠ್ಠಲ ಬೀರದೇವ ಮಂದಿರ ಕಟ್ಟಡದ ವಾಸ್ತುಶಾಂತಿ, ಮೂರ್ತಿಯ ಪ್ರತಿಷ್ಠಾಪನೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಈ ದೇವಸ್ಥಾನವು ಹೊನ್ನಿಹಾಳ ಗ್ರಾಮಕ್ಕೆ ಭಕ್ತಿಯ ಪ್ರೇರಣೆಯಾಗಲಿ, ಸಮುದಾಯದ ಏಕತೆಯ ಸಂಕೇತವಾಗಲಿ ಎಂದು ಆಶಿಸುತ್ತೇನೆ ಎಂದರು.
ಭಾರತ ದೇಶದ ಸಂಸ್ಕೃತಿ ಎಷ್ಟು ಶ್ರೀಮಂತವಾಗಿದೆ ಎನ್ನುವುದಕ್ಕೆ ಹೊನ್ನಿಹಾಳ ಗ್ರಾಮದಲ್ಲಿ 5 ದಿನಗಳ ಕಾಲ ಏರ್ಪಡಿಸಲಾಗಿದ್ದ ಕಾರ್ಯಕ್ರಮಗಳೇ ಸಾಕ್ಷಿ. ಇಲ್ಲಿನ ಜನರು 5 ದಿನಗಳಿಂದ ಬೆಳಗ್ಗೆ ಉಪಾಹಾರ, ಮಧ್ಯಾಹ್ನದ ಊಟ, ರಾತ್ರಿಯ ಊಟ ಎಲ್ಲವನ್ನೂ ಒಟ್ಟಿಗೆ ಕುಳಿತು ಮಾಡುತ್ತಿದ್ದಾರೆ. ಜಾತಿ, ಭಾಷೆಯ ಭೇದವಿಲ್ಲದೆ ಎಲ್ಲರೂ ಒಂದಾಗಿದ್ದಾರೆ. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಅರ್ಥೈಸಲು ದೇವಾಲಯಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಸಚಿವರು ಹೇಳಿದರು.
ನಾನು, ನನ್ನ ಸಹೋದರ ಚನ್ನರಾಜ ಹಟ್ಟಿಹೊಳಿ, ಮಗ ಮೃಣಾಲ್ ಹೆಬ್ಬಾಳಕರ್ ಆಗಲಿ ದೇವರ ಕೆಲಸಗಳನ್ನು ಮುಂದೆ ನಿಂತು ಮಾಡುತ್ತಿದ್ದೇವೆ. ನಾನು ಶಾಸಕಿಯಾದ ಬಳಿಕ ಕ್ಷೇತ್ರದ ವ್ಯಾಪ್ತಿಯಲ್ಲಿರುವ 114 ಹಳ್ಳಿಗಳಲ್ಲಿ 140 ದೇವಾಲಯಗಳನ್ನು ನಿರ್ಮಾಣ ಇಲ್ಲವೇ ಜೀರ್ಣೋದ್ಧಾರ ಮಾಡಲಾಗಿದೆ.  ಎಲ್ಲ ಸಮುದಾಯಗಳ ಮಂದಿರಗಳನ್ನೂ ಜೀರ್ಣೋದ್ಧಾರ ಮಾಡಲಾಗಿದೆ. ನಾನು ಪ್ರತಿ ದಿನ ಕನಿಷ್ಟ 4-5 ದೇವಸ್ಥಾನಗಳ ದರ್ಶನ ಮಾಡುತ್ತೇನೆ, ದೇವರ ಕಾರ್ಯದಲ್ಲಿ ಸದಾ ತೊಡಗಿಸಿಕೊಳ್ಳುತ್ತೇನೆ ಎಂದು ಸಚಿವರು ಹೇಳಿದರು.
* *12 ಲಕ್ಷ ರೂ ಚೆಕ್ ಹಸ್ತಾಂತರ*
ದೇವಸ್ಥಾನಕ್ಕೆ ಒಂದು ಕೋಟಿ ರೂ ಅನುದಾನ ಒದಗಿಸುವ ಭರವಸೆ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕಾರ್ಯಕ್ರಮದ ಸಂದರ್ಭದಲ್ಲೇ ಎರಡನೇ ಕಂತಿನ 12 ಲಕ್ಷ ರೂ. ಚೆಕ್ ನ್ನು ದೇವಸ್ಥಾನ ಸಮಿತಿಗೆ ಹಸ್ತಾಂತರಿಸಿದರು.
 ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ನಿರಂತರ 5 ದಿನಗಳ ಕಾಲ ಗ್ರಾಮಸ್ಥರಿಗೆ ಉಪಾಹಾರ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಗ್ರಾಮಸ್ಥರು ಅದ್ಧೂರಿಯ ಮೆರವಣಿಗೆ ಮೂಲಕ ದೇವಸ್ಥಾನ ಹಾಗೂ ವೇದಿಕೆಗೆ ಸ್ವಾಗತಿಸಿದರು. ಮೆರವಣಿಗೆ ಉದ್ದಕ್ಕೂ ಸಚಿವರಿಗೆ ಹೂಮಳೆಗರೆಯಲಾಯಿತು.
ಈ ವೇಳೆ ಕಾಗಿನೆಲೆಯ ಶ್ರೀ ಕನಕ ಗುರುಪೀಠದ  ಡಾ.ನಿರಂಜನಾನಂದ ಪುರಿ ಮಹಾಸ್ವಾಮಿಗಳು, ದೊಡವಾಡ ಹಿರೇಮಠದ ಷ.ಬ್ರ.ಶ್ರೀ ಜಡಿಸಿದ್ದೇಶ್ವರ ಶಿವಾಚಾರ್ಯರು, ಹುಲಜಂತಿ ಶ್ರೀಕ್ಷೇತ್ರ ಭೂ ಕೈಲಾಸ ಪಟ್ಟದ ಪೂಜ್ಯರಾದ ಶ್ರೀ ಮಾಳಿಂಗರಾಯ ಮಹಾರಾಜರು, ಹೊನ್ನಿಹಾಳ ಬ್ರಹನ್ಮಠದ ಪರಮಪೂಜ್ಯ ಶ್ರೀ ಬಸವರಾಜ ದೇವರು, ಬುಡಾ ಅಧಕ್ಷರಾದ ಲಕ್ಷಣರಾವ್ ಚಿಂಗಳೆ, ರೇಖಾ ಕಟಬುಗೋಳ, ನಾಗೇಶ ದೇಸಾಯಿ, ಶಂಕರಗೌಡ ಪಾಟೀಲ, ಪ್ರಕಾಶ ಹೊನ್ನಿಹಾಳ, ಶಿವಾನಂದ ಮಠದ, ಲಕ್ಷ್ಮಣ ಮಲ್ಲಮ್ಮಗೋಳ, ಗಣಪತಿ ಸುಳಗೇಕರ್, ಭರಮಾ ಕಟಬುಗೋಳ, ಯಶವಂತ ಉಚಗಾಂವ್ಕರ್, ಪ್ರಕಾಶ ಕಡ್ಯಾಗೋಳ, ಗ್ರಾಮಸ್ಥರು, ಮಹಿಳೆಯರು ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article