*ಬೆಂಗಳೂರು:* ಬಹುಭಾಷಾ ನಟಿ, ಪದ್ಮಭೂಷಣ ಬಿ.ಸರೋಜಾದೇವಿ ಅವರ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ವರನಟ ರಾಜ್ಕುಮಾರ್ ಸೇರಿದಂತೆ ಖ್ಯಾತ ನಟರೊಂದಿಗೆ ಅಭಿಯಿಸಿದ್ದ ಸರೋಜಾದೇವಿ, ತಮ್ಮ ಮನೋಜ್ಞ ಅಭಿನಯದಿಂದ *ಅಭಿನಯ ಸರಸ್ವತಿ* ಎಂದೇ ಗುರಿತಿಸಿಕೊಂಡಿದ್ದರು. ನಾನು ಚಿಕ್ಕವಯಸ್ಸಿನಿಂದಲೂ ಸರೋಜಾದೇವಿ ಅವರ ಚಲನಚಿತ್ರಗಳನ್ನು ನೋಡಿಕೊಂಡು ಬೆಳೆದಿದ್ದೇನೆ. ಇಡೀ ದಕ್ಷಿಣ ಭಾರತದಲ್ಲೇ ಅವರು ದೊಡ್ಡ ಹೆಸರು ಮಾಡಿದ್ದರು. ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಅವರ ಎಲ್ಲಾ ಅಭಿಮಾನಿಗಳಿಗೆ ಹಾಗೂ ಕುಟುಂಬ ವರ್ಗದವರಿಗೆ, ಸ್ನೇಹಿತರಿಗೆ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಸುಮಾರು ಆರು ದಶಕಗಳ ಕಾಲ ಕನ್ನಡ ಸೇರಿದಂತೆ ದೇಶದ ಹಲವಾರು ಭಾಷೆಗಳ ಚಿತ್ರಗಳಲ್ಲಿ ಅಭಿನೇತ್ರಿ ಬಿ. ಸರೋಜಾದೇವಿ ಅಭಿನಯಿಸಿದ್ದರು. ಕಿತ್ತೂರು ರಾಣಿ ಚೆನ್ನಮ್ಮ, ಮಲ್ಲಮ್ಮನ ಪವಾಡ, ಅಮರಶಿಲ್ಪಿ ಜಕ್ಕಣಾಚಾರಿ, ಶ್ರೀನಿವಾಸ ಕಲ್ಯಾಣ, ಬಬ್ರುವಾಹನ, ವಿಜಯನಗರದ ವೀರಪುತ್ರ ಸೇರಿದಂತೆ ಹಲವು ಪೌರಾಣಿಕ ಚಲನಚಿತ್ರಗಳಲ್ಲಿ ಮನೋಜ್ಞವಾಗಿ ನಟಿಸಿ, ಸಿನಿಪ್ರಿಯರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ.
ಪದ್ಮಭೂಷಣ ಪ್ರಶಸ್ತಿಯ ಜೊತೆಗೆ ಪದ್ಮಶ್ರೀ, ಡಾ.ರಾಜ್ಕುಮಾರ್ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ, ತಮಿಳುನಾಡು ಸರ್ಕಾರದಿಂದ ಕಲೈಮಾಣಿ ಪ್ರಶಸ್ತಿ, ಆಂಧ್ರ ಸರ್ಕಾರದಿಂದ ಎನ್ಟಿಆರ್ ಪ್ರಶಸ್ತಿಗೆ ಬಿ.ಸರೋಜಾದೇವಿ ಭಾಜನರಾಗಿದ್ದರು. ಅವರ ಅಭಿನಯ ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.