ಹುಬ್ಬಳ್ಳಿ: ಬಿವಿಬಿ ಕಾಲೇಜಿನಲ್ಲಿ ಎಂಸಿಎಯಲ್ಲಿ ಅಧ್ಯಯನ ನಡೆಸುತ್ತಿದ್ದ ವಿದ್ಯಾರ್ಥಿನಿ ನೇಹಾಳ ಕೊಲೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಕ್ಕ ನ್ಯಾಯ ಒದಗಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಂದಿಲ್ಲಿ ಹೇಳಿದರು.
ಮೃತ ನೇಹಾಳ ನಿವಾಸಕ್ಕಿಂದು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಹೇಯ ಕೃತ್ಯವಾಗಿದೆ. ಇದನ್ನು ಎಲ್ಲ ಸಮಾಜಗಳು ತೀವ್ರವಾಗಿ ಖಂಡಿಸಲೇಬೇಕು. ಇದರಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ ಎಂದರು.
ರಾಜ್ಯದಲ್ಲಿ ಇಂತಹ ಘಟನೆಗಳು ಪದೇ ಪದೇ ಮರುಕಳಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದು ಸೂಕ್ಷ್ಮ ಸಂದರ್ಭ, ಹೀಗಾಗಿ ಜವಾಬ್ದಾರಿ ಸ್ಥಾನದಲ್ಲಿದ್ದು, ಅವರೊಂದಿಗೆ ನಾನು ಕೂಡಾ ಇದ್ದೇನೆ. ಕುಟುಂಬಕ್ಕೆ ಸಾಂತ್ವನ, ಸಮಾಧಾನ ಹೇಳಿದ್ದೇನೆ. ಆದರೂ ತೀರದಂತಹ ದುಃಖ ಕುಟುಂಬಕ್ಕಿದೆ. ಸಮೂದಾಯ ದೊಡ್ಡದಾಗಿದ್ದು, ಇಡೀ ಸಮಾಜ ಅವರೊಂದಿಗೆ ಇದೆ. ಬೇರೆ ಕಡೆಗಳಲ್ಲಿ ಆಗಿರುವ ಘಟನೆಗಳನ್ನು ಈ ಘಟನೆಗೆ ಹೋಲಿಕೆ ಮಾಡಿ ಮಾತನಾಡುವುದು ಸರಿಯಲ್ಲ ಎಂದರು.
ನೇಹಾ ಹತ್ಯೆ ಘಟನೆಯನ್ನು ರಾಜಕಾರಣ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಇಂತಹ ಘಟನೆಗಳಲ್ಲಿ ರಾಜಕಾರಣ ಬದಿಗಿಟ್ಟು, ಓರ್ವ ತಾಯಿಯಾಗಿ ಆ ಜೀವಕ್ಕೆ ನ್ಯಾಯ ಒದಗಿಸುವುದು ನನ್ನ ಆದ್ಯವಾದ ಕರ್ತವ್ಯವಾಗಿದೆ. ಇಂತಹ ಘಟನೆಗಳಲ್ಲಿ ರಾಜಕೀಯ ಕುರಿತು ಚರ್ಚೆ ಮಾಡಿದರೇ ತನಿಖೆಯ ಹಾದಿ ಬೇರೆ ಸ್ವರೂಪ ಪಡೆಯಲಿದೆ. ಹೀಗಾಗಿ ಹೆಚ್ಚು ಮಾತನಾಡುವುದಿಲ್ಲ ಎಂದರು.