ಬೆಂಗಳೂರು, ಆ.31: ಗಣೇಶ ಪರಿಸರ ಮತ್ತು ಪ್ರಕೃತಿಯಿಂದಲೇ ಹುಟ್ಟಿದ ದೇವರಾಗಿದ್ದು, ಗಣಪತಿಯ ಪೂಜಿಸುವ ನಾವು ಪ್ರಕೃತಿ, ಪರಿಸರವನ್ನೂ ಉಳಿಸಬೇಕು, ಈ ಬಾರಿ ಬಣ್ಣ ರಹಿತ ಮಣ್ಣಿನ ವಿನಾಯಕ ಮೂರ್ತಿಯನ್ನು ಮಾತ್ರ ಪೂಜಿಸಿ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ನಾಡಿನ ಜನತೆಗೆ ಮನವಿ ಮಾಡಿದ್ದಾರೆ.
ಸಂದೇಶದಲ್ಲಿ ಅವರು, ಈ ವರ್ಷ ದೇಶಾದ್ಯಂತ ಸುರಿದ ಧಾರಾಕಾರ ಮಳೆಯಿಂದ ಹಲವು ಕಡೆ ಭೂ ಕುಸಿತ ಉಂಟಾಗಿ ಅನಾಹುತಗಳು ಸಂಭವಿಸಿವೆ. ಹೀಗಾಗಿ ಪ್ರಕೃತಿ ಪರಿಸರ ಸಂರಕ್ಷಣೆಯ ಹೊಣೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಈ ಬಾರಿಯ ಗಣೇಶೋತ್ಸವವನ್ನು ಪರಿಸರ ಸ್ನೇಹಿ ಮಾಡೋಣ. “ಪ್ರಕೃತಿ ವಿಕೋಪ ನಿವಾರಕ – ನಮ್ಮ ಪರಿಸರ ವಿನಾಯಕ’’ನನ್ನು – ಬಣ್ಣ ರಹಿತ ಮಣ್ಣಿನ ಮೂರ್ತಿಗಳ ರೂಪದಲ್ಲಿ ಪೂಜಿಸೋಣ ಎಂದು ಕರೆ ನೀಡಿದ್ದಾರೆ.
ಸಂಕಲ್ಪ: ಜಲಚರಗಳ ಸಾವಿಗೆ ಕಾರಣವಾಗುವ, ಜಲ ಮೂಲಗಳನ್ನು ಕಲುಷಿತಗೊಳಿಸುವ ರಾಸಾಯನಿಕ ಬಣ್ಣ ಲೇಪಿತ ಪಿಓಪಿ ಗಣೇಶ ಮೂರ್ತಿ ಪೂಜೆ ಮಾಡುವುದಿಲ್ಲ; ಬದಲಾಗಿ ಸಣ್ಣ ಮಣ್ಣಿನ ಪರಿಸರ ಸ್ನೇಹಿ ಗಣಪನನ್ನೇ ತಂದು ಪೂಜಿಸಿ, ಮನೆಯಲ್ಲೇ ವಿಸರ್ಜಿಸಿ ಆ ನೀರನ್ನು ಮರ -ಗಿಡಗಳಿಗೆ ಹಾಕುತ್ತೇನೆ ಎಂದು ಸಂಕಲ್ಪ ಮಾಡೋಣ ಎಂದು ಅವರು ವಿನಂತಿಸಿದ್ದಾರೆ.
ಹಬ್ಬದ ಸಂಭ್ರಮದಲ್ಲಿ, ಗಣೇಶನ ಮೆರವಣಿಗೆಯ ವೇಳೆ ಹಸಿರು ಪಟಾಕಿಯನ್ನಷ್ಟೇ ಹಚ್ಚಬೇಕು. ಶಬ್ದ ಮಾಲಿನ್ಯ ಆಗದಂತೆ ಧ್ವನಿವರ್ಧಕ ಬಳಸಬೇಕು ಜೊತೆಗೆ ಜಲ ಮಾಲಿನ್ಯ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ತಡೆಯಬೇಕು ಎಂದೂ ಈಶ್ವರ ಖಂಡ್ರೆ ನಾಡಿನ ಜನತೆಗೆ ಮನವಿ ಮಾಡಿದ್ದಾರೆ.
ಮುಚ್ಚಳಿಕೆ: ಎಲ್ಲ ಗಣೇಶೋತ್ಸವ ಸಮಿತಿಗಳಿಂದ ಮಣ್ಣಿನ ಗಣೇಶ ಮೂರ್ತಿಯನ್ನು ಮಾತ್ರ ವಿಸರ್ಜನೆ ಮಾಡುವುದಾಗಿ ಮುಚ್ಚಳಿಕೆ ಬರೆಸಿಕೊಂಡು ಪೆಂಡಾಲ್ ಗೆ ಅನುಮತಿ ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.