ಗದಗ, ಜನವರಿ 07: ರಾಜ್ಯದ ಪ್ರಭಾವಿ ಸಚಿವ ಹೆಚ್.ಕೆ ಪಾಟೀಲ್ ತವರು ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಗದಗ-ಬೆಟಗೇರಿ ಅವಳಿ ನಗರದ 35 ವಾರ್ಡ್ಗಳಿಗೆ ಕಳೆದ 20 ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗಿಲ್ಲ. ಇದರಿಂದ, ಕಾಂಗ್ರೆಸ್ ಪಕ್ಷದ ಸದಸ್ಯರು ನಗರಸಭೆ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ನಗರಸಭೆಗೆ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ನೇಮಕವಾಗಿದ್ದಾರೆ. ಹೀಗಾಗಿ, ಸಾರ್ವಜನಿಕರು ನೀರು ಬಿಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸದ್ಯ 35 ವಾರ್ಡ್ನ ಜನರಿಗೆ ಸರಿಯಾಗಿ ಕುಡಿಯುವ ನೀರು ಸಿಗುತ್ತಿಲ್ಲ. ಜನರು ಬೋರ್ವೆಲ್ ನೀರು ಕುಡಿದು ದಾಹ ನೀಗಿಸಿಕೊಳ್ಳುತ್ತಿದ್ದಾರೆ. ಸರಿಯಾಗಿ ನೀರು ಪೂರೈಸದೆ ಇರುವುದಕ್ಕೆ ಜನರು ವಾರ್ಡ್ಗಳ ಸದಸ್ಯರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕುಡಿಯುವ ನೀರು ಪೂರೈಸಿ ಅಂತ ಒತ್ತಾಯ ಮಾಡುತ್ತಿದ್ದಾರೆ.
ಜನರ ಆಕ್ರೋಶಕ್ಕೆ ಎಚ್ಚೆತ್ತ ನಗರಸಭೆ ಕಾಂಗ್ರೆಸ್ ಸದಸ್ಯರು ಜಿಲ್ಲಾಧಿಕಾರಿಗಳಿಗೆ ನೀರು ಪೂರೈಕೆ ಮಾಡುವಂತೆ ಮನವಿ ಮಾಡಿದ್ದಾರೆ. ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಕೆ ಪಾಟೀಲ್ ವಿರುದ್ಧವೇ ಸ್ವಪಕ್ಷದ ಸದಸ್ಯರು ಅಸಮಾಧಾನಗೊಂಡಿದ್ದಾರೆ. ಆದರೆ, ವಿಚಿತ್ರ ಅಂದ್ರೆ ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಂಬಂತೆ ಸಚಿವರನ್ನು ಬಿಟ್ಟು ಜಿಲ್ಲಾಧಿಕಾರಿಗೆ ಕಾಂಗ್ರೆಸ್ ಸದಸ್ಯರು ಬೊಟ್ಟು ಮಾಡುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ಧಾರಿತನದಿಂದ ಕುಡಿಯುವ ನೀರು ಸಿಗುತ್ತಿಲ್ಲ ಅಂತ ಆರೋಪ ಮಾಡುತ್ತಿದ್ದಾರೆ.